ನವದೆಹಲಿ : ಭಾರತ ಕ್ರೀಡಾ ಸಚಿವಾಲಯ ಕ್ರೀಡಾ ಸಾಧಕರಿಗೆ ನೀಡುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಗೆ ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಹಾಗೂ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ನೇಮಕಗೊಂಡಿದ್ದಾರೆ.
ಕ್ರೀಡಾ ಸಾಧಕರ ಆಯ್ಕೆಗೆ ಕ್ರೀಡಾ ಸಚಿವಾಲಯ ಸಮಿತಿಯೊಂದನ್ನು ನೇಮಕ ಮಾಡಿದೆ. ನಿವೃತ್ತ ನ್ಯಾಯಮೂರ್ತಿ ಮುಕುಂದಕಂ ಶರ್ಮಾ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಇನ್ನು ಸೆಹ್ವಾಗ್-ಸರ್ದಾರ್ ಸಿಂಗ್ ಜೊತೆಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿರುವ ದೀಪಾ ಮಲಿಕ್, ಅರ್ಜುನ ಪ್ರಶಸ್ತಿ ವಿಜೇತೆ ಮಾಜಿ ಟೇಬಲ್ ಟೆನ್ನಿಸ್ ಆಟಗಾರ್ತಿ ಮೊನಾಲಿಸಾ ಬರುವಾ, 1995ರಲ್ಲಿ ಅರ್ಜುನ ಪ್ರಶಸ್ತಿ ವಿಜೇತರಾಗಿದ್ದ ಬಾಕ್ಸರ್ ವೆಂಕಟೇಶನ್ ದೇವರಾಜನ್ ಹಾಗೂ ಕ್ರೀಡಾ ನಿರೂಪಕ ಮನೀಶ್ ಬಟಾವಿಯಾ ಮತ್ತು ಕ್ರೀಡಾ ಪತ್ರಕರ್ತರಾದ ಅಲೋಕ್ ಸಿನ್ಹಾ ಮತ್ತು ನೀರು ಭಾಟಿಯಾ ಕೂಡ ಸಮಿತಿಯಲ್ಲಿದ್ದಾರೆ.
ಸಮಿತಿಯಲ್ಲಿ ಕ್ರೀಡಾ ಸಚಿವಾಲಯದ ಅಧಿಕಾರಿಗಳಾದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಮಹಾನಿರ್ದೇಶಕ ಸಂದೀಪ್ ಪ್ರಧಾನ್, ಜಂಟಿ ಕಾರ್ಯದರ್ಶಿ (ಕ್ರೀಡಾ ಅಭಿವೃದ್ಧಿ) ಎಲ್ ಎಸ್ ಸಿಂಗ್ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS) ಸಿಇಒ ಕಮಾಂಡರ್ ರಾಜೇಶ್ ರಾಜಗೋಪಾಲನ್ ಕೂಡ ಇರಲಿದ್ದಾರೆ.
ಸಮಿತಿಯು ರಾಜೀವ್ ಗಾಂಧಿ ಖೇಲ್ ರತ್ನ, ದ್ರೋಣಾಚಾರ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿ, ರಾಷ್ಟ್ರೀಯ ಖೇಲ್ ಪ್ರೋತ್ಸಾಹಾನ್ ಪುರುಸ್ಕಾರ್ ಪ್ರಶಸ್ತಿ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿಗೆ ಸೂಕ್ತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಿದೆ.