ದಾಂತೇವಾಡ(ಛತ್ತೀಸ್ಘಡ): ದಿವ್ಯಾಂಗ ಬಾಲಕ ಕ್ರಿಕೆಟ್ ಆಡುವ ವಿಡಿಯೋವನ್ನು ಹೊಸ ವರ್ಷದ ಶುಭಾಶಯ ತಿಳಿಸಲು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದರು. ಇದೀಗ ಆ ಬಾಲಕ ಸಚಿನ್ಗೆ ಧನ್ಯವಾದ ತಿಳಿಸಿದ್ದಾನೆ.
ನಕ್ಸಲ್ ಪೀಡಿತ ಪ್ರದೇಶವಾದ ದಾಂತೇವಾಡದ ಪಂಚಾಯತಿಯಲ್ಲಿ ವಾಸಮಾಡುವ ಬಾಲಕ ಮಡ್ಡಾ ರಾಮ್ ಕವಾಸಿ ಪೊಲಿಯೋ ಕಾಯಿಲೆಯಿಂದ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ. ಆದರೂ ಕಳೆದೆರಡು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದಾನೆ. ತನ್ನ ಸ್ನೇಹಿತರೊಟ್ಟಿಗೆ ಕ್ರಿಕೆಟ್ ಆಡುವ ಈ ಬಾಲಕ ಯಾರ ಸಹಾಯವೂ ಇಲ್ಲದೆ ರನ್ಗಳಿಸಲು ಮೊಣಕಾಲು ಮತ್ತು ಕೈಗಳನ್ನು ಬಳಸುತ್ತಾನೆ.
ಎರಡೂ ಕಾಲು ಊನವಿದ್ದರೂ ಕ್ರಿಕೆಟ್ ಮೇಲೆ ತನಗಿರುವ ಅದಮ್ಯ ಪ್ರೇಮದಿಂದ ತನ್ನ ಸ್ನೇಹಿತರೊಂದಿಗೆ ಮೈದಾನದಲ್ಲಿ ನೆಲದಲ್ಲಿ ತೆವಳಿಕೊಂಡೇ ಕ್ರಿಕೆಟ್ ಆಡುತ್ತಿರುವ ಬಾಲಕನ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದರು. 2020ಕ್ಕೆ ಕಾಲಿಡಲು ನಿಮಗೆ ಈ ವಿಡಿಯೋ ಸ್ಫೂರ್ತಿಯಾಗಲಿ. ಈ ವಿಡಿಯೋ ನನ್ನ ಹೃದಯವನ್ನು ತುಂಬಿ ಬರುವಂತೆ ಮಾಡಿದೆ, ನಿಮಗೂ ಹಾಗೆಯೇ ಆಗುತ್ತದೆ ಎಂದು ಭಾವಿಸಿದ್ದೇನೆ ಎಂದು ಸಚಿನ್ ಭಾವಾನಾತ್ಮಕವಾಗಿ ಬರೆದುಕೊಂಡಿದ್ದರು.