ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಕ್ರಿಕೆಟಿಗರಾದ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ ಅವರಿಗೆ 8 ವರ್ಷಗಳ ನಿಷೇಧ ಹೇರಿ ಐಸಿಸಿ ಮಹತ್ವದ ನಿರ್ಧಾರ ಪ್ರಕಟಿಸಿದೆ. 2019ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಅರ್ಹತಾ ಪಂದ್ಯಗಳ ಸಂದರ್ಭದಲ್ಲಿ ಇವರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು 2019ರಲ್ಲಿ ಅಮಾನತು ಮಾಡಲಾಗಿತ್ತು. ಹೀಗಾಗಿ 2019ರ ಅಕ್ಟೋಬರ್ 16ದಿಂದಲೇ ಈ ನಿಷೇಧ ಜಾರಿಗೊಳ್ಳಲಿದೆ.
ಇದನ್ನೂ ಓದಿ: ವಿರಾಟ್ ರೀತಿ ಇಶಾನ್ ಕಿಶನ್, ರಿಷಭ್ ಪಂತ್ ಗೇಮ್ ಫಿನಿಶರ್ ಆಗಲಿ: ಸೆಹ್ವಾಗ್
ಯುಎಇ ತಂಡದ ಮಾಜಿ ಕ್ಯಾಪ್ಟನ್ ಆಗಿರುವ ಮೊಹಮ್ಮದ್ ನವೀದ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಶೈಮಾನ್ ಅನ್ವರ್ ಐಸಿಸಿ ಆರ್ಟಿಕಲ್ 2.1.1 ಪ್ರಕಾರ ತಪ್ಪಿತಸ್ಥರು ಎಂದು ಸಾಬೀತುಗೊಂಡಿದೆ. ನವೀದ್ ಯುಎಇ ಪರ 39 ಏಕದಿನ ಪಂದ್ಯ, 31 ಟಿ20 ಪಂದ್ಯಗಳನ್ನಾಡಿದ್ದು, ಶೈಮಾನ್ 40 ಏಕದಿನ ಹಾಗೂ 32 ಟಿ-20 ಪಂದ್ಯಗಳನ್ನಾಡಿದ್ದಾರೆ.