ನವದೆಹಲಿ: 2018ರ ನಂತರ ಐಪಿಎಲ್ನಿಂದ ದೂರ ಉಳಿದಿರುವ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತೆ ಐಪಿಎಲ್ಗೆ ಕಂಬ್ಯಾಕ್ ಮಾಡಲು ಸಿದ್ದರಾಗಿದ್ದಾರೆ.
ಕಳೆದ ವರ್ಷವಷ್ಟೇ ಎಲ್ಲಾ ಆವೃತ್ತಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಗೌತಿ ಮತ್ತೆ ಐಪಿಎಲ್ ಜೊತೆಗಿನ ನಂಟಸ್ತಿಕೆಗೆ ಸಿದ್ದತೆ ನಡೆಸಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ತಂಡದ ಮಾಲೀಕನಾಗಿ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಪೂರ್ವ ದೆಹಲಿ ಕ್ಷೇತ್ರದ ಸಂಸದ ಗೌತಮ್ ಗಂಭೀರ್, ಡೆಲ್ಲಿ ಕ್ಯಾಪಿಟಲ್ಸ್ ತಂಡ ಶೇರು ಕೊಂಡುಕೊಳ್ಳಲು ಸಿದ್ದತೆ ನಡೆಸಿದ್ದಾರೆ. ಜೆಎಸ್ಡಬ್ಲ್ಯೂ ಗ್ರೂಪ್ ಮತ್ತು ಜಿಎಂಆರ್ ಗ್ರೂಪ್ ತಲಾ 50 ರಷ್ಟು ಪಾಲುದಾರಿಕೆ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 10 ರಷ್ಟು ಪಾಲು ಕೊಂಡುಕೊಳ್ಳಲು ಗಂಭೀರ್ ತೀರ್ಮಾನ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಈಗಾಗಲೇ ಈ ಬಗ್ಗೆ ಜಿಎಂಆರ್ ಗ್ರೂಪ್ನೊಂದಿಗೆ ಮಾತುಕತೆ ನಡೆದಿದೆ. 10 ರಷ್ಟು ಪಾಲು ಕೊಂಡುಕೊಳ್ಳಲು 100 ಕೋಟಿ ರೂಪಾಯಿ ನೀಡಲು ಗಂಭೀರ್ ತಯಾರಾಗಿದ್ದು, ಐಪಿಎಲ್ ಆಡಳಿತ ಮಂಡಳಿ ತೀರ್ಮಾನಕ್ಕೆ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಗಂಭೀರ್ ಐಪಿಎಲ್ನಲ್ಲಿ ಕೆಕೆಆರ್ ತಂಡದ ನಾಯಕನಾಗಿ ಎರಡು ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದು, ಯಶಸ್ವಿ ನಾಯಕ ಎಂಬ ಹೆಸರು ಹೊಂದಿದ್ದಾರೆ. ಕಡೆಯದಾಗಿ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಗೌತಮ್ ಗಂಭೀರ್ ಆಡಿದ್ದರು.