ನವದೆಹಲಿ: 2002ರ ನಂತರ ಟೀಂ ಇಂಡಿಯಾ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದು, ಅಂತಹ ತಂಡ ಕಟ್ಟುವಲ್ಲಿ ಸೌರವ್ ಗಂಗೂಲಿ ಪಾತ್ರ ಅಪಾರವಾಗಿತ್ತು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದ ವೇಳೆ ತಂಡಕ್ಕೆ ಪದಾರ್ಪಣೆ ಮಾಡಿದ್ದ ವಾಸೀಂ ಜಾಫರ್, ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಆದರೂ ಸೌರವ್ ಗಂಗೂಲಿ ಅತ್ಯುತ್ತಮ ನಾಯಕ ಎಂದು ಗುಣಗಾಣ ಮಾಡಿದ್ದಾರೆ.
ಟೀಂ ಇಂಡಿಯಾ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಗಂಗೂಲಿ ಅತ್ಯದ್ಭುತ ತಂಡ ಕಟ್ಟುತ್ತಾರೆ. ಯುವ ಪ್ಲೇಯರ್ಸ್ಗೆ ಹೆಚ್ಚಿನ ಸಹಕಾರ ನೀಡುತ್ತಿದ್ದ ಅವರು, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್ ಹಾಗೂ ಹರ್ಭಜನ್ ಸಿಂಗ್ರಂತಹ ಆಟಗಾರರನ್ನು ಬೆಳೆಸಿದರು ಎಂದಿದ್ದಾರೆ.
ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಸೆಹ್ವಾಗ್ಗೆ ಆರಂಭಿಕನಾಗಿ ಕಣಕ್ಕಿಳಿಯುವಂತೆ ಮಾಡಿದ್ದು ಗಂಗೂಲಿ.ಇದೇ ವೇಳೆ ಯುವ ಆಟಗಾರರಾಗಿದ್ದ ಯುವಿ, ಜಹೀರ್ ಖಾನ್, ಹರ್ಭಜನ್ ಸಿಂಗ್ಗೆ ಬೆಂಬಲ ವ್ಯಕ್ತಪಡಿಸಿದರು ಎಂದಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಗಂಗೂಲಿ 146 ಏಕದಿನ ಪಂದ್ಯಗಳ ಪೈಕಿ 76ರಲ್ಲಿ ಗೆಲುವು ಸಾಧಿಸಿದ್ದು, 65 ಪಂದ್ಯಗಳಲ್ಲಿ ಸೋಲು ಕಂಡಿದ್ದು, 5 ಪಂದ್ಯಗಳಿಂದ ಫಲಿತಾಂಶ ಹೊರಬಿದ್ದಿಲ್ಲ. 49 ಟೆಸ್ಟ್ ಪಂದ್ಯಗಳ ಪೈಕಿ 21ರಲ್ಲಿ ಗೆಲುವು ಹಾಗೂ 13ರಲ್ಲಿ ಸೋಲು ಕಂಡಿದ್ದು, 15 ಪಂದ್ಯಗಳು ಡ್ರಾ ಆಗಿವೆ.