ಬೆಂಗಳೂರು: ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಸಿಡಿಸಿದ ಅಬ್ಬರದ ಶತಕ ಮತ್ತು ಬೌಲರ್ಗಳ ನೆರವಿನಿಂದ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿಯ ಮೂರನೇ ಪಂದ್ಯದಲ್ಲಿ ಒಡಿಶಾ ವಿರುದ್ಧ 101ರನ್ಗಳ ಜಯ ಸಾಧಿಸಿದೆ.
ಬೆಂಗಳೂರಿನ ಆಲೂರು ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 330 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಒಡಿಶಾ ತಂಡ 44 ಓವರ್ಗಳಲ್ಲಿ 228 ರನ್ಗಳಿಗೆ ಆಲೌಟ್ ಆಗಿ 101 ರನ್ಗಳಿಂದ ಸೋಲು ಕಂಡಿತು.
ಸುಭ್ರಾಂಸು ಸೆನಾಪತಿ 92 ಎಸೆತಗಳಲ್ಲಿ 78, ಅಂಕಿತ್ ಯಾದವ್ 63 ಎಸೆತಗಳಲ್ಲಿ 56 ರನ್ಗಳಿಸಿದ್ದು, ಬಿಟ್ಟರೆ ಒಡಿಶಾದ ಯಾವ ಬ್ಯಾಟ್ಸ್ಮನ್ ಕರ್ನಾಟಕ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾಗಲಿಲ್ಲ.
ವೇಗಿ ಪ್ರಸಿಧ್ ಕೃಷ್ಣ 46 ರನ್ ನೀಡಿ 3 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 47 ರನ್ ನೀಡಿ 3 ವಿಕೆಟ್ ಪಡೆದರು. ವೈಶಾಕ್ ಮತ್ತು ಸುಚಿತ್ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರ ಶತಕದ ನೆರವಿನಿಂದ 329 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಪಡಿಕ್ಕಲ್ 140 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ 152 ರನ್ ಸಿಡಿಸಿದರೆ, ಅಭಿಮನ್ಯು ಮಿಥುನ್ ಕೇವಲ 17 ಎಸೆತಗಳಲ್ಲಿ 5 ಸಿಕ್ಸರ್ಗಳ ಸಹಿತ ಅಜೇಯ 40 ರನ್ಗಳಿಸಿದರು. ನಾಯಕ ಸಮರ್ಥ್ 60, ಸಿದ್ಧಾರ್ಥ್ ಕೆವಿ 41 ರನ್ಗಳಿಸಿದರು.
ಕರ್ನಾಟಕ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಸಿ ಗುಂಪಿನಲ್ಲಿ 2ನೇ ಸ್ಥಾನಲ್ಲಿದೆ. ಫೆಬ್ರವರಿ 26 ರಂದು 3ಕ್ಕೆ 3 ಪಂದ್ಯ ಗೆದ್ದಿರುವ ಕೇರಳ ತಂಡದೆದುರು ಸೆಣಸಾಡಲಿದೆ. ಈ ಪಂದ್ಯ ಕ್ವಾರ್ಟರ್ ಫೈನಲ್ ಪ್ರವೇಶಿಸಿಲು ನಿರ್ಣಾಯಕವಾಗಲಿದೆ.
ಇದನ್ನು ಓದಿ:ವಿಜಯ್ ಹಜಾರೆ ಟ್ರೋಫಿ.. ಒಡಿಶಾ ವಿರುದ್ಧ 152 ರನ್ ಚಚ್ಚಿದ ದೇವದತ್ ಪಡಿಕ್ಕಲ್..