ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಭಾರತ ರತ್ನ ನೀಡಿ ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಭಾರತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶನಿವಾರ ಆಗಸ್ಟ್ 15ರಂದು ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಭಾರತ ಕ್ರಿಕೆಟ್ನ ಅದೃಷ್ಟ ಬದಲಿಸಿದ ಹಾಗೂ ಐಸಿಸಿಯ 3 ಟ್ರೋಫಿಗಳನ್ನು ಗೆದ್ದಿರುವ ವಿಶ್ವದ ಏಕೈಕ ನಾಯಕನಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಕಾಂಗ್ರೆಸ್ ಶಾಸಕರೊಬ್ಬರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಇದೀಗ ಅವರ ಜೊತೆ ಅಭಿಮಾನಿಗಳು ಕೈಜೋಡಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನ ಕಾಂಗ್ರೆಸ್ ಶಾಸಕ ಪಿಸಿ ಶರ್ಮಾ, ದೇಶದ ರತ್ನವಾಗಿರುವ ಎಂಎಸ್ ಧೋನಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
" ಎಂಎಸ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಕೀರ್ತಿಯನ್ನು ವಿಶ್ವದಲ್ಲಿ ಅತ್ಯುನ್ನತ ಸ್ಥಾನಕ್ಕೇರಿಸಿದ್ದಾರೆ. ಅವರು ದೇಶದ ರತ್ನ, ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಬೇಕೆಂದು" ಪಿಸಿ ಶರ್ಮಾ ತಮ್ಮ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಈಗಾಗಲೇ ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡುಲ್ಕರ್ ಅವರಿಗೆ ಭಾರತ ರತ್ನ ಪುರಸ್ಕಾರ ದೊರತಿದೆ. ಫೆಬ್ರವರಿ 04, 2014 ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಸಚಿನ್ ತೆಂಡುಲ್ಕರ್ ಭಾರತ ರತ್ನ ಪುರಸ್ಕಾರ ಪಡೆದಿದ್ದರು.
ಎಂಎಸ್ ಧೋನಿ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ 2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013 ಚಾಂಪಿಯನ್ ಟ್ರೋಫಿಯನ್ನು ಗೆದ್ದುಕೊಟ್ಟಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಯೂ ಅವರ ಹೆಸರಿನಲ್ಲಿದೆ.