ದುಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗಳು ತಮ್ಮ ನಡುವಿನ ಕ್ರಿಕೆಟ್ ಬಾಂಧವ್ಯ ಹೆಚ್ಚಿಸಿಕೊಳ್ಳಲು ಶನಿವಾರ ತಿಳುವಳಿಕೆ ಸಮರಣಿಕೆ(MoU) ಪತ್ರಕ್ಕೆ ಸಹಿ ಮಾಡುವ ಮೂಲಕ ಅತಿಥ್ಯ(ಹೋಸ್ಟಿಂಗ್) ಒಪ್ಪಂದವನ್ನು ಮಾಡಿಕೊಂಡಿವೆ.
"ನಮ್ಮ ಎರಡು ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಹೆಚ್ಚಿಸಿಕೊಳ್ಳಲು ನಾನು ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರೊಂದಿಗೆ ಬಿಸಿಸಿಐ ಮತ್ತು ಇಸಿಬಿ ನಡುವೆವಿನ MoU ಮತ್ತು ಆತಿಥ್ಯ(ಹೋಸ್ಟಿಂಗ್) ಒಪ್ಪಂದಕ್ಕೆ ಇಂದು ಸಹಿ ಹಾಕಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶನಿವಾರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಖಜಾಂಚಿ ಅರುಣ್ ಧುಮಾಲ್ ಸ್ಥಳದಲ್ಲಿದ್ದರು ಎಂದು ಅವರು ಹೇಳಿದ್ದಾರೆ. ಬಿಸಿಸಿಐ ಮತ್ತು ಇಸಿಬಿ ನಡುವಿನ ಈ ಒಪ್ಪಂದ ಮಾರ್ಚ್-ಏಪ್ರಿಲ್ನಲ್ಲಿ 2021ರ ಐಪಿಎಲ್ ಆವೃತ್ತಿಯನ್ನ ಹೋಸ್ಟ್ ಮಾಡುವ ಪ್ರಕ್ರಿಯೆಗೆ ದಾರಿ ಮಾಡಿಕೊಟ್ಟಿದೆ. ಆದರೆ, ಯುಎಇಯಲ್ಲಿ 2021ರ ಐಪಿಎಲ್ ಆಯೋಜಿಸುವುದರ ಭವಿಷ್ಯ ಕೊರೊನಾ ಲಸಿಕೆ ಮತ್ತು 2020ರ ಐಪಿಎಲ್ನ ಯಶಸ್ಸನ್ನು ಅವಲಂಬಿಸಿರುತ್ತದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಈ ಟೂರ್ನಮೆಂಟ್ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಯುಎಇನ ಮೂರು ಸ್ಥಳಗಾಳದ ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಹಾಗೂ ಶಾರ್ಜಾದಲ್ಲಿ 12 ಪಂದ್ಯ ನಡೆಯಲಿವೆ.