ಸಿಡ್ನಿ: ಭಾರತದ ಮೇಲೆ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಬಿಗಿ ಹಿಡಿತ ಸಾಧಿಸಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಆಸ್ಟ್ರೇಲಿಯಾ ಸೋಲಿನ ರುಚಿ ತೋರಿಸಿದೆ. ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಹೀನಾಯ ಸೋಲು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ಆರಂಭಿಕ ಜೋಡಿ ಡೇವಿಡ್ ವಾರ್ನರ್(67) ಹಾಗೂ ಕ್ಯಾಪ್ಟನ್ ಫಿಂಚ್ (60) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಾರ್ಕೂಸ್ (56) ರನ್ಗಳ ಸಹಾಯದಿಂದ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿತ್ತು.
ಕಿವೀಸ್ ಪರ ಇಶ್ ಸೋಧಿ 3 ವಿಕೆಟ್ ಪಡೆದರೆ, ಫಾರ್ಗೋಸ್ ಹಾಗೂ ಸಾಂಟ್ನರ್ ತಲಾ 2 ವಿಕೆಟ್ ಪಡೆದರು.
![Australia vs New Zealand 1st ODI](https://etvbharatimages.akamaized.net/etvbharat/prod-images/es-wycmxqampiqs_1303newsroom_1584100140_578.jpg)
ಆದ್ರೆ, 259 ರನ್ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್ ಆರಂಭಿಕ ಆಘಾತ ಅನುಭವಿಸಿತು. ಓಪನರ್ ಆಗಿ ಕ್ರೀಸಿಗಿಳಿದ ಹೆನ್ರಿ ಕೇವಲ 10 ರನ್ ಕಲೆ ಹಾಕಿ ಪೆವಿಲಿಯನ್ ಹಾದಿ ಹಿಡಿದರು. ನಂತರ ಬಂದ ಕ್ಯಾಪ್ಟನ್ ವಿಲಿಯಮ್ಸನ್ ಕೂಡ ಘರ್ಜಿಸಲಿಲ್ಲ. ಅವರು ತಂಡಕ್ಕೆ ಕೇವಲ 19 ರನ್ ಸೇರಿಸಿ ಔಟಾದರು. ಇದರ ಬೆನ್ನಲ್ಲೇ ಟೇಲರ್ 4 ರನ್ ಮಾಡಿ ಆಸಿಸ್ ವೇಗಿಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಉತ್ತಮವಾಗಿ ಕ್ರಿಸ್ ಕಚ್ಚಿ ಆಡುತ್ತಿದ್ದ ಗಪ್ಟಿಲ್ 40 ರನ್ ಸಂಗ್ರಹಿಸಿ ವಿಕೆಟ್ ಒಪ್ಪಿಸಿದ್ದರಿಂದ ತಂಡ 82 ರನ್ಗಳಿಸುವಷ್ಟರಲ್ಲಿ ಟೀಂ ಮಹತ್ವದ 4 ವಿಕೆಟ್ ಕಳೆದುಕೊಂಡಿತು. ಈ ಮೂಲಕ ತೀವ್ರ ಸಂಕಷ್ಟಕ್ಕೊಳಗಾಯಿತು.
ಇದಾದ ಬಳಿಕ ಟಾಮ್ ಲ್ಯಾಥಮ್(38), ಕಾಲಿನ್ ಗ್ರ್ಯಾಂಡ್ಹೋಮ್(25) ಆಸೀಸ್ ದಾಳಿಗೆ ಸ್ವಲ್ಪಮಟ್ಟಿನ ಪ್ರತಿರೋಧ ಒಡ್ಡಿದರೂ ಹೇಳಿಕೊಳ್ಳುವಂಥ ಪ್ರಯೋಜನವಾಗಲಿಲ್ಲ. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ತಂಡ 187 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 71 ರನ್ಗಳ ಸೋಲು ಕಂಡಿತು.
ಆಸ್ಟ್ರೇಲಿಯಾ ಪರ ಕಮ್ಮಿನ್ಸ್, ಮಿಷೆಲ್ ಮಾರ್ಷ್ ತಲಾ 3 ವಿಕೆಟ್ ಸಾಧನೆ ಮಾಡಿದರೆ, ಜಂಪಾ ಹಾಗೂ ಹ್ಯಾಜಲ್ವುಡ್ ತಲಾ 2 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು.
ಈ ಗೆಲುವಿನೊಂದಿಗೆ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿತು. ಮಿಚೆಲ್ ಮಾರ್ಷ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.