ಹೈದರಾಬಾದ್: ಹಿಟ್ ಮ್ಯಾನ್ ರೋಹಿತ್ ಶರ್ಮಾ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ''ಇಂಡಿಯನ್ ಕ್ರಿಕೆಟರ್'' ಎಂಬ ಟ್ಯಾಗ್ ಅನ್ನು ತೆಗೆದಿದ್ದಾರೆ. ಈ ಮೂಲಕ ಬಿಸಿಸಿಐ ಸೋಮವಾರ ಪ್ರಕಟಿಸಿದ ಆಸ್ಟ್ರೇಲಿಯಾ ಪ್ರವಾಸ ಮಾಡುವ ಭಾರತ ತಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸೋಮವಾರ ಬಿಸಿಸಿಐ ಆಸ್ಟ್ರೇಲಿಯಾದ ವಿರುದ್ಧ ಟಿ-20, ಏಕದಿನ ಹಾಗೂ ಟೆಸ್ಟ್ ಪಂದ್ಯಕ್ಕೆ ಆಟಗಾರರ ಪಟ್ಟಿ ಪ್ರಕಟ ಮಾಡಿತ್ತು. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ''ಇಂಡಿಯನ್ ಕ್ರಿಕೆಟರ್'' ಎಂಬ ಟ್ಯಾಗ್ ತೆಗೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರೋಹಿತ್ ಶರ್ಮಾ ಟೀಂ ಇಂಡಿಯಾದ ಉಪನಾಯಕರಾಗಿದ್ದು, ಪ್ರಸ್ತುತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನವೆಂಬರ್ 3ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವ ನಿರೀಕ್ಷೆಯಿದೆ.