ಮುಂಬೈ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ನಲ್ಲಿ ನಾಲ್ಕನೇ ಕ್ರಮಾಂಕವು ಮೊದಲಿನಿಂದಲೂ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಕೆಲ ತಿಂಗಳುಗಳು ಬಾಕಿ ಇದ್ದು, ತಂಡದ ನಾಯಕ ರೋಹಿತ್ ಶರ್ಮಾ ಕೂಡ ನಾಲ್ಕನೇ ಕ್ರಮಾಂಕದ ಅಸ್ಥಿರತೆ ಬಗ್ಗೆ ಮಾತನಾಡಿದ್ದಾರೆ.
ಮುಂಬೈನಲ್ಲಿ ಲಾಲಿಗಾ ಕಾರ್ಯಕ್ರಮದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೋಹಿತ್, ತಂಡದ ಪ್ರಮುಖ ಬ್ಯಾಟಿಂಗ್ ವಿಭಾಗದ ಬಗ್ಗೆ ಅನಿಸಿಕೆ ಹಂಚಿಕೊಳ್ಳುತ್ತ, ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಯಾವೊಬ್ಬ ಆಟಗಾರನೂ ಸಹ ಸ್ಥಿರವಾಗಿ ಸ್ಥಾನ ಕಾಯ್ದುಕೊಳ್ಳಲಿಲ್ಲ. ಇದು ಹಲವು ವರ್ಷಗಳಿಂದಲೂ ನಮ್ಮ ತಂಡದಲ್ಲಿ ಚರ್ಚಾ ವಿಷಯವಾಗಿದೆ. ಬಹುದಿನದ ಸಮಸ್ಯೆಯಾಗಿದ್ದು, ಇಂಗ್ಲೆಂಡ್ನಲ್ಲಿ ನಡೆದ ಕಳೆದ ವಿಶ್ವಕಪ್ನಲ್ಲಿಯೂ ಇತ್ತು ಎಂದು ಹೇಳಿದರು.
ಸುಮಾರು ವರ್ಷಗಳ ತನಕ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಯಶಸ್ಸು ಕಂಡಿದ್ದರು. ಆದರೆ, ದುರಾದೃಷ್ಟವಶಾತ್ ಗಾಯಗೊಂಡಿದ್ದರಿಂದ ತಂಡದಿಂದ ಹೊರಗುಳಿಯಬೇಕಾಯಿತು. 4-5 ವರ್ಷಗಳವರೆಗೆ ಅಯ್ಯರ್ ಉತ್ತಮ ಪ್ರದರ್ಶನ ತೋರಿದ್ದರು. ಬಳಿಕ ಹಲವರು ಗಾಯಕ್ಕೆ ತುತ್ತಾದ ಕಾರಣ ಬೇರೆ ಬೇರೆ ಆಟಗಾರರು ಆ ಕ್ರಮಾಂಕದಲ್ಲಿ ಬಂದು ಬ್ಯಾಟ್ ಮಾಡಿದ್ದಾರೆ. ಕೆಲ ಬ್ಯಾಟರ್ಗಳು ಗಾಯಗೊಂಡರೆ, ಮತ್ತೆ ಕೆಲವರು ಕಳಪೆ ಫಾರ್ಮ್ನಿಂದ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ ಎಂದರು.
2019ರ ಏಕದಿನ ವಿಶ್ವಕಪ್ ಬಳಿಕ 4ನೇ ಕ್ರಮಾಂಕದಲ್ಲಿ 11 ಮಂದಿ ಆಟಗಾರರು ಬ್ಯಾಟ್ ಮಾಡಿದ್ದಾರೆ. ಅದರಲ್ಲಿ ಐಯ್ಯರ್ ಹಾಗೂ ರಿಷಭ್ ಪಂತ್ 10ಕ್ಕೂ ಅಧಿಕ ಸಲ ಕಣಕ್ಕಿಳಿದಿದ್ದಾರೆ. ಸದ್ಯ ಪಂತ್ ಗಾಯದಿಂದಾಗಿ 2023ರ ವಿಶ್ವಕಪ್ನಿಂದ ಹೊರಬಿದ್ದಿದ್ದು, ಇನ್ನೊಂದೆಡೆ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ.
ಪ್ರಸ್ತುತ ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಗಾಯದಿಂದ ಗುಣಮುಖರಾಗುತ್ತಿದ್ದು, ಭಾರಿ ಗಾಯಗಳಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಾಲ್ಕು ತಿಂಗಳಿಂದ ಯಾವುದೇ ಮಾದರಿಯ ಕ್ರಿಕೆಟ್ ಆಡಿಲ್ಲ. ಶಸ್ತ್ರಚಿಕಿತ್ಸೆಯ ಅನುಭವ ನನಗೂ ಇದೆ. ಚಿಕಿತ್ಸೆ ಬಳಿಕ ಆಡುವುದು ಸುಲಭವಲ್ಲ ಎಂಬ ಅರಿವಿದೆ. ಗಾಯದ ಬಳಿಕ ಅವರಿಬ್ಬರೂ ಹೇಗೆ ಆಡಲಿದ್ದಾರೆ ಎಂಬುದನ್ನು ನೋಡಬೇಕಿದೆ ಎಂದು ರೋಹಿತ್ ಹೇಳಿದರು.
ವಿಶ್ವಕಪ್ ತಂಡದ ಆಯ್ಕೆಗಾಗಿ ಹಲವು ಆಟಗಾರರು ನಮ್ಮ ಮುಂದಿದ್ದಾರೆ. ಮಹತ್ವದ ಟೂರ್ನಿಗೂ ಮುನ್ನ ಏಷ್ಯಾಕಪ್ ನಡೆಯಲಿದ್ದು, ಅಲ್ಲಿ ತಂಡದ ಸಂಯೋಜನೆ ಬಗ್ಗೆ ಯೋಜನೆ ರೂಪಿಸಲಾಗುವುದು. ನಾವು ಗೆಲ್ಲುವ ನಿಟ್ಟಿನಲ್ಲಿ ಮೈದಾನಕ್ಕಿಳಿಯಲಿದ್ದು, ಜೊತೆಗೆ ನಮ್ಮೆದುರು ಇರುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಆದರೆ, ಪ್ರಮುಖ ತಂಡಗಳ ವಿರುದ್ಧ ಒತ್ತಡದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ನಾನು ಆದ್ಯತೆ ನೀಡುತ್ತೇನೆ ಎಂದು ನಾಯಕ ರೋಹಿತ್ ತಿಳಿಸಿದರು.
ತಂಡದ ಆಯ್ಕೆಗೆ ಒಂದೆರಡು ಆಟಗಾರರಿಗಿಂತ ಹಲವರು ಲಭ್ಯರಾಗಿರುವುದು ಉತ್ತಮ ವಿಚಾರ. ಆದರೆ, ಪ್ರಮುಖ ಸಂದರ್ಭದಲ್ಲಿ ಯಾರೆಲ್ಲ ಆಡಲು ಫಿಟ್ ಆಗಿರುತ್ತಾರೆ ಎಂಬುದೂ ಮುಖ್ಯವಾಗಿದೆ. ಫಿಟ್ ಆಗಲಿ ಎಂದು ನಾನು ಹಾರೈಸುತ್ತೇನೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಹಿಟ್ಮ್ಯಾನ್ ಹೇಳಿದರು.
ಇದನ್ನೂ ಓದಿ: ODI World Cup: ಭಾರತ-ಪಾಕ್ ಸೇರಿ 8 ಪಂದ್ಯಗಳ ದಿನ ಬದಲು; ಇದೇ 15ರಿಂದ ಟಿಕೆಟ್ ಬುಕ್ಕಿಂಗ್ ಶುರು