ಮುಂಬೈ: ಬುಧವಾರ ಬಿಸಿಸಿಐ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಘೋಷಿಸಿದ್ದಲ್ಲದೆ, ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಿಸಿತ್ತು. ಆಯ್ಕೆ ಸಮಿತಿ ಸೀಮಿತ ಓವರ್ಗಳ ತಂಡಗಳಿಗೆ ಇಬ್ಬರು ನಾಯಕರ ಅವಶ್ಯಕತೆಯಿಲ್ಲ ಎಂದು ಭಾವಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಟಿ20 ನಾಯಕತ್ವ ತ್ಯಜಿಸಲು ಬಿಸಿಸಿಐ ಹೇಳಿರಲಿಲ್ಲ:
ಎಎನ್ಐ ಜೊತೆ ಮಾತನಾಡಿದ ದಾದಾ, ಕ್ರಿಕೆಟ್ ಮಂಡಳಿ ವಿರಾಟ್ ಕೊಹ್ಲಿಯವರನ್ನು ಟಿ20 ನಾಯಕತ್ವ ತ್ಯಜಿಸುವಂತೆ ಹೇಳಿರಲಿಲ್ಲ. ಸ್ವತಃ ವಿರಾಟ್ ಆ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಆಯ್ಕೆಗಾರರು ವೈಟ್ ಬಾಲ್ ತಂಡಗಳಿಗೆ ಪ್ರತ್ಯೇಕ ನಾಯಕರ ಅಗತ್ಯವಿಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
"ಬಿಸಿಸಿಐ ಟಿ20 ನಾಯಕತ್ವವನ್ನು ತ್ಯಜಿಸದಂತೆ ಕೊಹ್ಲಿಗೆ ಮನವಿ ಮಾಡಿತ್ತು. ಆದರೆ ಕೊಹ್ಲಿ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಇದೀಗ ಆಯ್ಕೆಗಾರರು ಸೀಮಿತ ಓವರ್ಗಳ ತಂಡಗಳಿಗೆ ಇಬ್ಬರು ನಾಯಕರಾಗುವುದು ಸರಿಯಲ್ಲ ಎಂದು ಭಾವಿಸಿದ್ದಾರೆ. ಹಾಗಾಗಿ ವಿರಾಟ್ ಕೊಹ್ಲಿಯನ್ನು ಟೆಸ್ಟ್ ತಂಡದಲ್ಲಿ ನಾಯಕನಾಗಿ ಮುಂದುವರಿಸಲು ಮತ್ತು ರೋಹಿತ್ ಶರ್ಮಾ ಅವರಿಗೆ ವೈಟ್ ಬಾಲ್ ತಂಡಗಳ ಜವಾಬ್ದಾರಿಯನ್ನು ನೀಡಿದ್ದಾರೆ. ಅಧ್ಯಕ್ಷನಾಗಿ ನಾನು ವೈಯಕ್ತಿಕವಾಗಿ ವಿರಾಟ್ ಕೊಹ್ಲಿ ಜೊತೆ ಈ ಕುರಿತು ಮಾತನಾಡಿದ್ದೇನೆ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರೂ ಅವರೊಂದಿಗೆ ಚರ್ಚೆ ನಡೆಸಿದ್ದಾರೆ" ಎಂದು ಗಂಗೂಲಿ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಮೇಲೆ ಭರವಸೆಯಿದೆ:
ರೋಹಿತ್ ಶರ್ಮಾ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ವಿರಾಟ್ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಭಾರತೀಯ ಕ್ರಿಕೆಟ್ ಒಳ್ಳೆಯ ಕೈಯಲ್ಲಿದೆ ಎಂದು ಬಿಸಿಸಿಐಗೆ ವಿಶ್ವಾಸವಿದೆ. ಸೀಮಿತ ಓವರ್ಗಳ ಕ್ರಿಕೆಟ್ಗೆ ನಾಯಕನಾಗಿ ಇಷ್ಟು ವರ್ಷ ತಂಡವನ್ನು ಮುನ್ನಡೆಸಿದ್ದಕ್ಕೆ ವಿರಾಟ್ಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ಹೇಳಿದ್ದಾರೆ.
ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರೋಹಿತ್ ಶರ್ಮಾ ಟೆಸ್ಟ್ ತಂಡದ ಉಪನಾಯಕನಾಗಿಯೂ ನೇಮಕಗೊಂಡಿದ್ದಾರೆ.
ಇದನ್ನೂ ಓದಿ:ಬೋರ್ಡ್ ನೀಡಿದ್ದ 48 ಗಂಟೆ ಸಮಯದಲ್ಲಿ ನಾಯಕತ್ವ ತ್ಯಜಿಸದ ಕೊಹ್ಲಿ, ಬಲವಂತದಿಂದ ಕೆಳಗಿಳಿಸಿದ ಬಿಸಿಸಿಐ