ಕರಾಚಿ: ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲೂ ಬ್ಯಾಟರ್ಗಳೇ ಪ್ರಾಬಲ್ಯ ಸಾಧಿಸಿದ್ದಾರೆ. ಪ್ರವಾಸಿ ತಂಡ ಬರೋಬ್ಬರಿ 2 ದಿನದಲ್ಲಿ 180 ಓವರ್ ಬ್ಯಾಟಿಂಗ್ ಮಾಡಿ 505 ರನ್ಗಳಿಸಿ 3ನೇ ದಿನಕ್ಕೂ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ. ತವರಿನ ಲಾಭ ಪಡೆಯುವಲ್ಲಿ ವಿಫಲರಾಗಿರುವ ಪಾಕಿಸ್ತಾನ ಎರಡು ದಿನಗಳಲ್ಲಿ 8 ವಿಕೆಟ್ ಪಡೆದುಕೊಂಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಒಂದು ಇನ್ನಿಂಗ್ಸ್ನಲ್ಲಿ ಮಾತ್ರ ಪ್ರವಾಸಿ ತಂಡದ ಎಲ್ಲಾ ವಿಕೆಟ್ ಪಡೆದರೆ, ಇತ್ತ ಆಸೀಸ್ ತಂಡ 2 ಇನ್ನಿಂಗ್ಸ್ ಸೇರಿ ಅತಿಥೇಯ ತಂಡದ 4 ವಿಕೆಟ್ಗಳನ್ನು ಮಾತ್ರ ಪಡೆದಿತ್ತು.ಇದೀಗ 2ನೇ ಟೆಸ್ಟ್ನಲ್ಲೂ ಬ್ಯಾಟರ್ಗಳಿಗೆ ಸೀಮಿತವಾಗಿದ್ದು, 2 ದಿನಗಳ ಕಾಲ ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು 505ರನ್ಗಳಿಸಿ 3ನೇ ದಿನಕ್ಕೂ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.
ಮೊದಲ ದಿನ ಆಸ್ಟ್ರೇಲಿಯಾ ತಂಡ 3 ವಿಕೆಟ್ ಕಳೆದುಕೊಂಡು 251 ರನ್ಗಳಿಸಿತ್ತು. ಉಸ್ಮಾನ್ ಖವಾಜ ಅಜೇಯ 126 ಮತ್ತು ನೇಥನ್ ಲಿಯಾನ್ ಖಾತೆ ತೆರೆಯದೇ ಕ್ರೀಸ್ನಲ್ಲಿದ್ದರು.
ಇಂದು ಬ್ಯಾಟಿಂಗ್ ಮುಂದುವರಿಸಿದ ಈ ಜೋಡಿ 4ನೇ ವಿಕೆಟ್ಗೆ 54 ರನ್ ಸೇರಿಸಿದರು. ಲಿಯಾನ್ 38 ರನ್ಗಳಿಸಿ ಔಟಾದರೆ, ಖವಾಜ 369 ಎಸೆತಗಳಲ್ಲಿ 15 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 160 ರನ್ಗಳಿಸಿದರು. ಅಲೆಕ್ಸ್ ಕ್ಯಾರಿ 92, ಟ್ರಾವಿಸ್ ಹೆಡ್ 23, ಕ್ಯಾಮರಾನ್ ಗ್ರೀನ್ 28 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಮಿಚೆಲ್ ಸ್ಟಾರ್ಕ್ 28 ಮತ್ತು ಪ್ಯಾಟ್ ಕಮಿನ್ಸ್ ಖಾತೆ ತೆರೆಯದೇ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಫಹೀಮ್ ಆಶ್ರಫ್ 55ಕ್ಕೆ 2, ಸಾಜಿದ್ ಖಾನ್ 151ಕ್ಕೆ2, ನೌಮನ್ ಅಲಿ 115ಕ್ಕೆ1 , ಬಾಬರ್ ಅಜಮ್ 7ಕ್ಕೆ1, ಹಸನ್ ಅಲಿ 67ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ:ಕಪಿಲ್ ದೇವ್ ಹೆಸರಿನಲ್ಲಿದ್ದ 40 ವರ್ಷಗಳ ದಾಖಲೆ ಮುರಿದ ರಿಷಭ್ ಪಂತ್