ಪ್ಯಾರಿಸ್: ಫ್ರೆಂಚ್ ಓಪನ್ 2021 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಡೆನ್ಮಾರ್ಕ್‌ನ ಜೂಲಿ ಜಾಕೋಬ್ಸೆನ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿ 21-15, 21-18ರಲ್ಲಿ ತಮ್ಮ ಎದುರಾಳಿ ಜಾಕೋಬ್‌ಸೆನ್ ಅವರನ್ನು ಮಣಿಸಿದರು. ಸಿಂಧು ಮುಂದಿನ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಲೈನ್ ಕ್ರಿಸ್ಟೋಫರ್ಸನ್ ಅವರನ್ನು ಪ್ಯಾರಿಸ್‌ನ ಸ್ಟೇಡ್ ಪಿಯರೆ ಡಿ ಕೂಬರ್ಟಿನ್‌ನಲ್ಲಿ ಎದುರಿಸಲಿದ್ದಾರೆ.
16ನೇ ಸುತ್ತಿಗೆ ಪ್ರವೇಶ:
ವಿಶ್ವದ 10ನೇ ಶ್ರೇಯಾಂಕದ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ 18-21, 21-17, 21-13ರಿಂದ ಲೀ ಜೆ-ಹುಯೆ ಮತ್ತು ಯಾಂಗ್ ಪೊ-ಹ್ಸುವಾನ್ ಅವರನ್ನು ಮಣಿಸಿ ಪುರುಷರ ಡಬಲ್ಸ್ 16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಸೈನಾ ನಿವೃತ್ತಿ:
ಈ ನಡುವೆ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ತಮ್ಮ ಆರಂಭಿಕ ಸುತ್ತಿನ ಪಂದ್ಯದಲ್ಲೇ ಗಾಯದಿಂದ ನಿವೃತ್ತಿ ಹೊಂದಿದರು. ಮಹಿಳಾ ಸಿಂಗಲ್ಸ್ ಹಣಾಹಣಿಯಲ್ಲಿ ಸೈನಾ ಜಪಾನ್‌ನ ಸಯಾಕಾ ತಕಾಹಶಿ ವಿರುದ್ಧ 21-11, 9-2ರಿಂದ ಹಿನ್ನಡೆಯಲ್ಲಿದ್ದರು.
ಕಶ್ಯಪ್ಗೆ ಸೋಲು:
2014ರ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ಜಯಿಸಿದ್ದ ಪರುಪಳ್ಳಿ ಕಶ್ಯಪ್ ಕೂಡ ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲೇ ಪರಾಭವಗೊಂಡರು. ಕಶ್ಯಪ್ 17-21, 21-17, 11-21ರಲ್ಲಿ ಫ್ರೆಂಚ್ ಆಟಗಾರ ಬ್ರೈಸ್ ಲೆವರ್ಡೆಜ್ ವಿರುದ್ಧ ಸೋಲುಂಡರು.
ಶ್ರೀಕಾಂತ್ಗೆ ನಿರಾಸೆ:
ಭಾರತದ ಮತ್ತೋರ್ವ ಆಟಗಾರ ಹಾಗೂ ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ ಕೂಡ ಸೋಲು ಕಂಡರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಸ್ತುತ ವಿಶ್ವದ ನಂ.1 ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 18-21, 22-20, 19-21ರ ಅಂತರದಲ್ಲಿ ನಿರಾಸೆ ಅನುಭವಿಸಿದರು.
ಶ್ರೀಕಾಂತ್ ಮೊದಲ ಸೆಟ್ನಲ್ಲಿ ಸೋತರೂ, ಎರಡನೇ ಸೆಟ್ನಲ್ಲಿ 22-20ರ ಮೂಲಕ ಪುಟಿದೇಳುವ ಭರವಸೆ ಮೂಡಿಸಿದರು. ಮೂರನೇ ಗೇಮ್‌ನಲ್ಲಿ ಒಂದು ಹಂತದಲ್ಲಿ 19-17ರಿಂದ ಮುನ್ನಡೆಯಲ್ಲಿದ್ದರು. ಆದರೆ ಕೊನೆಯ ಹಂತದಲ್ಲಿ ಮೊಮೊಟಾ ನಾಲ್ಕು ನೇರ ಅಂಕಗಳನ್ನು ಪಡೆದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: ಗುಡ್ನ್ಯೂಸ್: ನೆಟ್ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಹಾರ್ದಿಕ್