ಮಗಳು ಜಾನಕಿ ಧಾರಾವಾಹಿಯ ನಂತರ ಒಂದು ವರ್ಷಗಳ ಕಾಲ ಕಿರುತೆರೆಯಿಂದ ದೂರವಿದ್ದ ಟಿ.ಎನ್. ಸೀತಾರಾಮ್ ಅವರು ಹೊಸ ಕಥೆಯ ಮೂಲಕ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಹೌದು, 'ಮತ್ತೆ ಮನ್ವಂತರ' ಎಂಬ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಟಿ.ಎನ್. ಸೀತಾರಾಮ್.
ಮತ್ತೆ ಮನ್ವಂತರ ಧಾರಾವಾಹಿಯು ಮಹಿಳಾ ಕ್ರೀಡಾಪಟುವಿನ ಸುತ್ತ ಸಾಗಲಿದೆ. ಮಹಿಳಾ ಕ್ರೀಡಾಪಟು ಸಾಧನೆಯ ಹಾದಿ ಕ್ರಮಿಸುವಾಗ ಏನೆಲ್ಲಾ ತೊಂದರೆಗಳು ಆಗುತ್ತದೆ, ಯಾವೆಲ್ಲಾ ಕಷ್ಟಗಳು ಎದುರಾಗುತ್ತದೆ, ಅದನ್ನೆಲ್ಲಾ ಆಕೆ ಹೇಗೆ ದಾಟುತ್ತಾಳೆ ಎಂಬುದೆಲ್ಲಾ ಮತ್ತೆ ಮನ್ವಂತರ ಧಾರಾವಾಹಿಯ ಕಥಾ ಹಂದರ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಬಿಗ್ ಬದಲಾವಣೆ... ಹೀಗೂ ಆಗುತ್ತಾ? ಹೌದು ಸ್ವಾಮಿ!
ಈ ಧಾರಾವಾಹಿಯ ಮೂಲಕ ಮೇಧ ಎಂಬ ಹೊಸ ಪ್ರತಿಭೆಯನ್ನು ಕಿರುತೆರೆ ಜಗತ್ತಿಗೆ ಪರಿಚಯಿಸಲಿದ್ದಾರೆ ಟಿ.ಎನ್ ಸೀತಾರಾಮ್. ಇದರ ಹೊರತಾಗಿ ರೂಪ ಗುರುರಾಜ್, ಮಾಳವಿಕಾ ಅವಿನಾಶ್ ಮುಖ್ಯ ಭೂಮಿಕೆಯಲ್ಲಿರುವ ಈ ಧಾರಾವಾಹಿಯಲ್ಲಿ ಟಿ.ಎನ್.ಸೀತಾರಾಮ್ ಅವರು ಮಾಮೂಲಿಯಂತೆ ವಕೀಲರಾಗಿ ಮೋಡಿ ಮಾಡಲಿದ್ದಾರೆ.
ಮತ್ತೆ ಮನ್ವಂತರ ಹೆಸರು ಕೇಳಿದಾಗ ಮನ್ವಂತರ ಧಾರಾವಾಹಿಯು ಕಣ್ಣ ಮುಂದೆ ಬರುತ್ತದೆ. ಆದರೆ ಹಳೆಯ ಮನ್ವಂತರಕ್ಕೂ, ಹೊಸ ಮತ್ತೆ ಮನ್ವಂತರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಎರಡೂ ಬೇರೆ ಬೇರೆಯದೇ ಕಥೆ ಎಂದು ಹೇಳುತ್ತಾರೆ ಸೀತಾರಾಮ್.
ಮೇಧಾ ಯಾರು?
ಮೇಧಾ ವಿದ್ಯಾಭೂಷಣ ಇವರು ಖ್ಯಾತ ಗಾಯಕ ವಿದ್ಯಾಭೂಷಣ ಅವರ ಮಗಳು. ಮೇಧಾ ಕೂಡ ಗಾಯಕಿ. ಪಿಇಎಸ್ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಈಗ ಈ ಧಾರಾವಾಹಿ ಮೂಲಕ ಮೇಧಾ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮೇಧಾ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ಅವರ ಪಾತ್ರ ಹೇಗಿರಲಿದೆ ಎನ್ನುವ ಬಗ್ಗೆ ಈಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.