ಕಿರುತೆರೆಯ ವಿಶಾಲೂ ಎಂದು ಪರಿಚಿತರಾಗಿರುವ ಇವರ ನಿಜವಾದ ಹೆಸರು ಸುನೇತ್ರಾ ಪಂಡಿತ್. ಕಿರುತೆರೆ ನಟಿ ಮಾತ್ರವಲ್ಲ ರಂಗಭೂಮಿ ಕಲಾವಿದೆ ಕೂಡಾ. ಕಿರುತೆರೆ ಹಿರಿತೆರೆ ನಟಿ, ಕಂಠದಾನ ಕಲಾವಿದೆ ಹೀಗೆ ಕಲೆಯ ವಿವಿಧ ಪ್ರಾಕಾರಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುನೇತ್ರಾ ಪಂಡಿತ್ ಅವರಿಗೆ ಹೆಸರು ತಂದು ಕೊಟ್ಟಿದ್ದು ಸಿಲ್ಲಿ ಲಲ್ಲಿಯ ವಿಶಾಲೂ ಪಾತ್ರ.
ಬಹಳ ವರ್ಷಗಳ ನಂತರ ಸುನೇತ್ರಾ ಪಂಡಿತ್ ಮತ್ತೆ ಕಿರುತೆರೆಗೆ ಮರಳಿ ಬರುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಇದೇ ತಿಂಗಳು 24 ರಿಂದ ಆರಂಭವಾಗಲಿರುವ 'ಮನಸಾರೆ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಸುನೇತ್ರಾ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಸಿಹಿ ಕಹಿ ಚಂದ್ರು ನಿರ್ದೇಶನದ ಕಾಮಿಡಿ ಧಾರಾವಾಹಿ 'ಸಿಲ್ಲಿ ಲಲ್ಲಿ'ಯಲ್ಲಿ ನಾಯಕಿ ಲಲ್ಲಿ ಅಲಿಯಾಸ್ ಲಲಿತಾಂಬ ಆಪ್ತ ಕಾರ್ಯದರ್ಶಿಯಾಗಿ ನಟಿಸಿದ ಸುನೇತ್ರಾ ಪಂಡಿತ್ ಬಹು ಬೇಗನೇ ವೀಕ್ಷಕರಿಗೆ ಹತ್ತಿರವಾಗಿ ಬಿಟ್ಟರು. ಮಾತ್ರವಲ್ಲ ಅವರು ಹೇಳುತ್ತಿದ್ದ ಮೇಡಂ ಮೇಡಂ ಡೈಲಾಗ್ ಜನರ ಮನಸ್ಸನ್ನು ಸೆಳೆದು ಬಿಟ್ಟಿತ್ತು. ಸುಮಾರು 40ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿರುವ ಸುನೇತ್ರಾ ಪಂಡಿತ್ ಯಾರೇ ನೀನು ಚೆಲುವೆ, ಉಲ್ಟಾ ಪಲ್ಟಾ, ನಿನಗೋಸ್ಕರ ಮುಂತಾದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡವರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ ಆತ್ಮಬಂಧನದಲ್ಲಿ ಮಾತಂಗಿ ಪಾತ್ರಕ್ಕೆ ಜೀವ ತುಂಬಿದ ಸುನೇತ್ರಾ ಅವರ ಅಭಿನಯಕ್ಕೆ ಮನಸೋಲದವರಿಲ್ಲ. ಯಾವುದೇ ಪಾತ್ರ ಕೊಟ್ಟರೂ ನಿರರ್ಗಳವಾಗಿ ನಟಿಸುವ ಸುನೇತ್ರಾ ಪಂಡಿತ್ ಮತ್ತೊಮ್ಮೆ ಕಿರುತೆರೆಯತ್ತ ಮುಖ ಮಾಡಲಿದ್ದಾರೆ. ಸುನೇತ್ರಾ ಕಂಠದಾನ ಕಲಾವಿದೆಯಾಗಿಯೂ ಹೆಸರು ಗಳಿಸಿದ್ದಾರೆ. ನಟಿಯರಿಗೆ ತಮ್ಮ ಧ್ವನಿ ನೀಡುವ ಮೂಲಕ ಕೂಡಾ ಸುನೇತ್ರಾ ಹೆಸರಾಗಿದ್ದಾರೆ. ಪ್ರೇಮಾ, ಶಿಲ್ಪ, ರಮ್ಯಾ ಕೃಷ್ಣ, ಚಾರುಲತಾ, ರಂಭಾ ಹೀಗೆ ಅನೇಕ ನಟಿಯರಿಗೆ ಸುನೇತ್ರಾ ತಮ್ಮ ಧ್ವನಿ ನೀಡಿದ್ದಾರೆ.