ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬಗಳ ಪೈಕಿ ಹೋಳಿಯೂ ಒಂದು. ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ಸಡಗರದಿಂದ ಆಚರಿಸುವ ಬಣ್ಣದ ಓಕುಳಿಯ ಈ ಹಬ್ಬವನ್ನು ನೋಡುವುದೇ ಚೆಂದ. ಅದರಲ್ಲೂ ದೊಡ್ಡ ದೊಡ್ಡ ನಗರಗಳಲ್ಲಿ ಯುವಕರು, ಯುವತಿಯರು, ಮಕ್ಕಳು, ದೊಡ್ಡವರು ಸೇರಿ ಹೋಳಿಯನ್ನು ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಿಸುತ್ತಾರೆ.
![Neha gowda](https://etvbharatimages.akamaized.net/etvbharat/prod-images/kn-bng-04-holi-alart-photo-ka10018_11032020164102_1103f_1583925062_436.jpg)
ಆದರೆ ಕೆಲವೊಮ್ಮೆ ಈ ಸಂತಸದ ವಾತಾವರಣವನ್ನು ದುಷ್ಕರ್ಮಿಗಳು ಅಸಭ್ಯ ವರ್ತನೆಗಾಗಿ ದುರುಪಯೋಗ ಪಡಿಸಿಕೊಳ್ಳಲು ಕಾಯುತ್ತಿರುತ್ತಾರೆ. ಹೆಣ್ಣು ಮಕ್ಕಳ ಮೇಲೆ ಹೋಳಿ ಹಚ್ಚುವ ನೆಪದಲ್ಲಿ ಅಸಭ್ಯವಾಗಿ ವರ್ತಿಸುವ ಪುರುಷರಿಗೆ ಈ ಅಕ್ಕ ತಂಗಿಯರು ಎಚ್ಚರಿಕೆ ನೀಡಿದ್ದಾರೆ. ಕಿರುತೆರೆಯ ಗೊಂಬೆ ಆಗಿ ಮಿಂಚಿದ ನೇಹಾ ಗೌಡ ಮತ್ತು ಅಕ್ಕ ಸೋನು ಗೌಡ ಇಬ್ಬರೂ ವಿಭಿನ್ನ ಶೈಲಿಯ ಫೋಟೋಶೂಟ್ ಮಾಡಿಸುವ ಮೂಲಕ ಕಿಡಿಗೇಡಿಗಳಿಗೆ ವಾರ್ನಿಂಗ್ ಮಾಡಿದ್ದಾರೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಬೇಡಿ ಎಂದು ಮನವಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
![Sonu gowda, Neha gowda](https://etvbharatimages.akamaized.net/etvbharat/prod-images/kn-bng-04-holi-alart-photo-ka10018_11032020164102_1103f_1583925062_1082.jpg)
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಶ್ರುತಿ ಆಲಿಯಾಸ್ ಗೊಂಬೆಯಾಗಿ ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ನೇಹಾ ಅವರ ಬರಹ ಇನ್ಸ್ಟ್ರಾಗ್ರಾಮ್ನಲ್ಲಿ ವೈರಲ್ ಆಗಿದೆ. 'ನಾಡಿನ ಜನತೆ ಎಲ್ಲರೂ ಜೊತೆ ಸೇರಿ ಆಚರಿಸುವ ಬಣ್ಣದ ಓಕುಳಿಯ ಹಬ್ಬ ಹೋಳಿ, ಒಗ್ಗಟ್ಟಿನ ಸಂಕೇತವೂ ಹೌದು. ಇಂತಹ ಸಡಗರದ ವಾತಾವರಣದಲ್ಲಿ ಕೆಲವರು ಅಸಭ್ಯ ವರ್ತನೆ ಮಾಡುವುದು ನಿಜಕ್ಕೂ ಬೇಸರದ ಸಂಗತಿ. ಹೋಳಿಯ ಬಣ್ಣದಿಂದ ಚರ್ಮಕ್ಕೆ ದುಷ್ಪರಿಣಾಮ ಆಗುತ್ತದೆ ನಿಜ. ಆದರೆ ಅಸಭ್ಯ ವರ್ತನೆಯಿಂದ ಮನಸ್ಸಿನ ಮೇಲೆ ಅದಕ್ಕಿಂತ ಪರಿಣಾಮ ಬೀರುತ್ತದೆ. ಪ್ರತಿಸಲವೂ ನಡೆಯುವ ಇದು ಈ ಕೃತ್ಯ ಈ ಬಾರಿ ನಡೆಯದಿರಲಿ. ಇದರ ಬದಲಿಗೆ ಸದ್ದುದೇಶದಿಂದ, ಸಂಭ್ರಮದಿಂದ ಬಣ್ಣದ ಓಕುಳಿಯಲ್ಲಿ ಪಾಲ್ಗೊಳ್ಳಿ. ಎಲ್ಲರ ಹಕ್ಕನ್ನು ಗೌರವಿಸಿ' ಎಂದು ನೇಹಾ ಮನವಿ ಮಾಡಿದ್ದಾರೆ.
![Sonu gowda](https://etvbharatimages.akamaized.net/etvbharat/prod-images/kn-bng-04-holi-alart-photo-ka10018_11032020164102_1103f_1583925062_608.jpg)
'ಇಂತಿ ನಿನ್ನ ಪ್ರೀತಿಯ', 'ಗುಳ್ಟು' ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಿರುವ ಸೋನು ಗೌಡ ಕೂಡಾ ತಂಗಿ ನೇಹಾ ಅವರಿಗೆ ಸಾಥ್ ನೀಡಿದ್ದಾರೆ. ವಿಭಿನ್ನ ಶೈಲಿಯ ಥೀಮ್ ಮೂಲಕ ಜನತೆಗೆ ಸಂದೇಶ ಸಾರಿದ್ದಾರೆ ಈ ಅಕ್ಕ ತಂಗಿ. ಅವರ ಈ ಕ್ರಿಯೇಟಿವಿಟಿಗೆ ನೆಟಜನ್ಸ್ ತಲೆ ತೂಗಿದ್ದಾರೆ.