ವಿನು ಬಳಂಜ ನಿರ್ದೇಶನದ 'ಜಾನಕಿ ರಾಘವ' ಧಾರಾವಾಹಿಯಲ್ಲಿ ನಾಯಕನಾಗಿ ನಟನಾ ಪಯಣ ಆರಂಭಿಸಿದ ಚಾಕಲೇಟ್ ಬಾಯ್ ಪವನ್ ರವೀಂದ್ರ, ಇಂದು 'ರಂಗನಾಯಕಿಯ ಚಿರಂತ್' ಎಂದೇ ಜನಪ್ರಿಯ.
ರಾಜ್ಯ ಮಟ್ಟದ ಕ್ರೀಡಾಪಟುವಾಗಿದ್ದ ಪವನ್, ನಟನಾ ಲೋಕಕ್ಕೆ ಬಂದುದು ತೀರಾ ಆಕಸ್ಮಿಕ. ಪವನ್ ರವೀಂದ್ರ ಅವರನ್ನು ನೋಡಿದ ಕೆಲವರು ಮಾಡೆಲಿಂಗ್ನಲ್ಲಿ ಕಾಣಿಸಿಕೊಳ್ಳುವ ಸಲಹೆ ನೀಡಿದ್ದರು. ಹೀಗೆ ಬಂದ ಸಲಹೆಯನ್ನು ಅಲ್ಲಗಳೆಯದ ಪವನ್, ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟರು. ಮಾಡೆಲಿಂಗ್ ಲೋಕದಲ್ಲಿ ಮಿಂಚುವ ಮೊದಲೇ ನಟನಾ ಲೋಕ ಕೈ ಬೀಸಿ ಕರೆಯಿತು.
![chiranth](https://etvbharatimages.akamaized.net/etvbharat/prod-images/6029394_ii.jpg)
ಅದ್ಯಾವಾಗ ಜಾನಕಿ ರಾಘವ ಧಾರಾವಾಹಿಯಿಂದ ನಟಿಸುವ ಆಫರ್ ಬಂದಿತೋ, ಒಲ್ಲೆ ಎನ್ನದ ಪವನ್, ಇಂದು ಅದೆಷ್ಟು ಹುಡುಗಿಯರ ಹಾರ್ಟ್ ಫೇವರಿಟ್ ಆಗಿಬಿಟ್ಟಿದ್ದಾರೆ. ವಿನು ಬಳಂಜ ನಿರ್ದೇಶನದಲ್ಲಿ ಮೊದಲ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆತದ್ದು ನನ್ನ ಪುಣ್ಯ. ನಟನೆ, ನೃತ್ಯದ ಗಂಧಗಾಳಿ ಇಲ್ಲದ ನಾನು ಇದೀಗ ಕಿರುತೆರೆಯಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡೆ ಎನ್ನುತ್ತಾರೆ ಪವನ್.
ಜಾನಕಿ ರಾಘವ ಧಾರಾವಾಹಿಯ ನಂತರ 'ಏಟು ಎದಿರೇಟು', 'ರಂಗನಾಯಕಿ' ಧಾರಾವಾಹಿಯಲ್ಲಿ ಚಿರಂತ್' ಪಾತ್ರದಲ್ಲಿ ನಟಿಸಿರುವ ಪವನ್ ರವೀಂದ್ರ ಅವರಿಗೆ ಕಿರುತೆರೆಯ ಹೆಸರಾಂತ ನಿರ್ಮಾಣ ಸಂಸ್ಥೆಯಿಂದಲೂ ಸಾಕಷ್ಟು ಆಫರ್‌ಗಳು ಬರುತ್ತಿವೆ. ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಿಂದಲೂ ಕೂಡಾ ಅವಕಾಶಗಳು ಒದಗಿ ಬರುತ್ತಿದೆ. ಕಿರುತೆರೆ ಮತ್ತು ಹಿರಿತೆರೆ ಇವೆರಡನ್ನು ಏಕಕಾಲಕ್ಕೆ ನಿಭಾಯಿಸಲು ಸಾಧ್ಯವಿಲ್ಲ ಎಂದು ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಪವನ್ ರವೀಂದ್ರ ಅವರ ಅಭಿನಯಕ್ಕೆ ಕಿರುತೆರೆ ಪ್ರಿಯರು ಮನ ಸೋತಿದ್ದಾರೆ.