ದಿವಂಗತ ಡಿ.ವಿ. ಸುಧೀಂದ್ರ ಅವರು ಸ್ಥಾಪಿಸಿ ಬೆಳೆಸಿದ, ಕನ್ನಡ ಸಿನಿಮಾರಂಗದ ಖ್ಯಾತ ಪ್ರಚಾರ ಸಂಸ್ಥೆ 'ಶ್ರೀ ರಾಘವೇಂದ್ರ ಚಿತ್ರವಾಣಿ'. ಪ್ರಸ್ತುತ ಈ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
- " class="align-text-top noRightClick twitterSection" data="">
ಸುಧೀಂದ್ರ ವೆಂಕಟೇಶ್ ಪುತ್ರ ಪವನ್ ವೆಂಕಟೇಶ್, ಸಿನಿಮಾ ಪ್ರಚಾರಕರ್ತ ಡಿ.ವಿ. ಸುಧೀಂದ್ರ ಅವರ ಬದುಕಿನ ಹಾದಿಯನ್ನು ತೆರೆದಿಡುವ 'ಸುಧೀಂದ್ರ ಸಿನಿ ಪಯಣ' ಎನ್ನುವ ಸಾಕ್ಷ್ಯಚಿತ್ರವನ್ನು ನಿರ್ದೇಶಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ನಂತರ 'ಕೊರೊನಾ ಕರಾಳ ರೋಗ ನಾಶ' ಎಂಬ ಕಿರುಚಿತ್ರವೊಂದನ್ನು ರೂಪಿಸಿ ಕೋವಿಡ್-19 ವಿವಿಧ ಮಜಲುಗಳನ್ನು ಒಂದೊಳ್ಳೆ ಸಂದೇಶದ ಜೊತೆ ಅನಾವರಣಗೊಳಿದ್ದರು. ಈಗ 'ಶ್ರೀ ರಾಮಜನ್ಮ ಭೂಮಿ' ವಿಚಾರದ ಹಿನ್ನೆಲೆ ತಿಳಿಸಿಕೊಡುವ 'ಅಯೋಧ್ಯಾ' ಎಂಬ ವಿಡಿಯೋವೊಂದನ್ನು ತಯಾರಿಸಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪವನ್ ಕ್ರಿಯಾಶೀಲ ಯುವಕ. ಚಿಕ್ಕಂದಿನಿಂದಲೂ ಸಿನಿಮಾ ವಾತಾವರಣದಲ್ಲೇ ಬೆಳೆದಿರುವುದು ಮತ್ತು ತಾನೊಬ್ಬ ಸಿನಿಮಾ ನಿರ್ದೇಶಕನಾಗಬೇಕೆಂಬ ಆಸಕ್ತಿ ಹೊಂದಿರುವ ಕಾರಣಕ್ಕೆ ಪವನ್ ಸಣ್ಣಸಣ್ಣ ಪ್ರಯತ್ನ ಮಾಡುತ್ತಾ ಬರುತ್ತಿದ್ದಾರೆ. ಸಹೋದರಿ ಚಂದನಾ ವೆಂಕಟೇಶ್, ಸ್ನೇಹಿತರಾದ ಮನೋಜ್ ಹೆಚ್.ಎನ್, ಮಲ್ಲೇಶ್, ರಕ್ಷಿತ್ ಅವರನ್ನು ಒಳಗೊಂಡ ತಂಡವನ್ನು ಕಟ್ಟಿಕೊಂಡು ಪವನ್ ಒಂದಾದ ಮೇಲೊಂದು ಪ್ರಯತ್ನ ಮುಂದುವರೆಸಿದ್ದಾರೆ.
ಸಾಕ್ಷ್ಯಚಿತ್ರ, ಕಿರುಚಿತ್ರದ ನಂತರ ಅಯೋಧ್ಯೆ ಕುರಿತಾಗಿ ಪವನ್ ರೂಪಿಸಿರುವ ಮೂರು ನಿಮಿಷಗಳ ವಿಡಿಯೋದಲ್ಲಿ, ಶ್ರೀ ರಾಮಜನ್ಮ ಭೂಮಿಯ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸಲಾಗಿದೆ. ಪತ್ರಿಕಾ ವರದಿಯೊಂದನ್ನು ಆಧಾರವಾಗಿಟ್ಟುಕೊಂಡು ರೂಪಿಸಿರುವ ಈ ವಿಡಿಯೋದಲ್ಲಿ ಗ್ರಾಫಿಕ್ಸ್, ವಿಎಫ್ಎಕ್ಸ್ ಕಲೆಯನ್ನು ಪ್ರಧಾನವಾಗಿ ಬಳಸಿಕೊಳ್ಳಲಾಗಿದೆ. ಹಿನ್ನೆಲೆ ಧ್ವನಿ ಮೂಲಕ ಪುಣ್ಯಭೂಮಿಯ ಪರಿಚಯ ಮಾಡಿಕೊಡಲಾಗಿದೆ.
ಪವನ್ ವೆಂಕಟೇಶ್ ಸಿನಿಮಾಗೆ ಬೇಕಿರುವ ಒಂದೊಂದೇ ವಿಭಾಗಗಳ ಬಗ್ಗೆ ತಿಳಿದುಕೊಳ್ಳುತ್ತಲೇ ಅದನ್ನು ತನ್ನ ಕ್ರಿಯಾಶೀಲತೆಗೆ ಒಗ್ಗಿಸಿಕೊಳ್ಳುತ್ತಿದ್ದಾರೆ. ಈಗ ರೂಪಿಸಿರುವ ವಿಡಿಯೋವನ್ನು ತಮ್ಮದೇ ಆದ ಪವನ್ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.