ಅಪ್ಪ ಮಗಳ ನಡುವಿನ ಅವಿನಾಭಾವ ಸಂಬಂಧದ ನವಿರಾದ ಕಥೆಯನ್ನು ಒಳಗೊಂಡ ಧಾರಾವಾಹಿ ಇಂದಿನಿಂದ ಪ್ರತಿ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಉದಯ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ತನ್ನ ಅಪ್ಪನ ಪ್ರೀತಿಗಾಗಿ ಹಂಬಲಿಸುವ ಮಗಳ ಕಥೆಯೇ 'ಮನಸಾರೆ'.
ಮಗಳು ಹುಟ್ಟುವಾಗಲೇ ಪತ್ನಿ ಸಾವನ್ನಪ್ಪಿದಳಲ್ಲಾ ಎಂದು ಮಗಳನ್ನು ದ್ವೇಷಿಸುವ ತಂದೆ, ಕಳೆದುಹೋದ ತಂದೆಯ ಪ್ರೀತಿಗಾಗಿ ಹಂಬಲಿಸುತ್ತಿರುವ ಮಗಳು, ಮಲಮಗಳೆಂದು ಕಾಣದೆ ಪ್ರೀತಿಯಿಂದ ನೋಡಿಕೊಳ್ಳುವ ಮಲತಾಯಿ.. ಹೀಗೆ ವಿಭಿನ್ನ ಶೈಲಿಯ ಧಾರಾವಾಹಿ ನಿಮ್ಮ ಮುಂದೆ ಬರುತ್ತಿದೆ. ರವಿ ಕಿಶೋರ್ ನಿರ್ದೇಶನದ ಮನಸಾರೆ ಧಾರಾವಾಹಿಗೆ ಚಿನ್ನಾರಿ ಮುತ್ತ ಶುಭ ಹಾರೈಸಿದ್ದಾರೆ. 'ಮಗಳು ಅಂದರೆ ಯಾವ ತಂದೆಗೆ ತಾನೇ ಪ್ರೀತಿ ಇರುವುದಿಲ್ಲ..? ಆದರೆ ಇಲ್ಲಿ ಒಬ್ಬ ಮಗಳು ತನ್ನ ತಂದೆಯ ಮಮಕಾರ, ಪ್ರೀತಿಗೋಸ್ಕರ 'ಮನಸಾರೆ' ಕಾಯುತ್ತಿದ್ದಾಳೆ ಅವಳಿಗೆ ಆ ಪ್ರೀತಿ ದೊರೆಯುವುದಾ ಎಂಬುದನ್ನು ನೀವೇ ನೋಡಿ' ಎಂದು ವಿಜಯ ರಾಘವೇಂದ್ರ ಧಾರಾವಾಹಿ ಬಗ್ಗೆ ಹೇಳಿ ತಂಡಕ್ಕೆ ಶುಭ ಕೋರಿದ್ದಾರೆ.
ಇನ್ನು ಈ ಚಿತ್ರದ ಮೂಲಕ ಹಿರಿಯ ನಟ ಸುನಿಲ್ ಪುರಾಣಿಕ್ ಮತ್ತೆ ನಟನೆಯತ್ತ ವಾಪಸಾಗಿದ್ದಾರೆ. ನಾಯಕಿಯ ತಂದೆ ಪಾತ್ರದಲ್ಲಿ ಸುನೀಲ್ ಪುರಾಣಿಕ್ ಕಾಣಿಸಿಕೊಳ್ಳಲಿದ್ದಾರೆ. ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕನ ದೊಡ್ಡಪ್ಪನಾಗಿ ಅಭಿನಯಿಸಿದ ನಂತರ ಸಿನಿಮಾ ನಿರ್ದೇಶನ ಮಾಡುವ ಸಲುವಾಗಿ ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದೆ. ಇದೀಗ ಒಂದೂವರೆ ವರ್ಷಗಳ ಸುದೀರ್ಘ ಬ್ರೇಕ್ ನಂತರ ಮತ್ತೆ ಕಿರುತೆರೆಗೆ ಮರಳಿ ಬಂದಿದ್ದೇನೆ. 'ಮನಸಾರೆ' ಧಾರಾವಾಹಿಯಿಂದ ನಟಿಸುವ ಆಫರ್ ಬಂದಾಗ ನನಗೆ ಇಲ್ಲ ಎಂದು ಹೇಳಲು ಸಾಧ್ಯವಾಗಿಲ್ಲ. ಈ ಪಾತ್ರ ಬಹಳ ಚಾಲೆಂಜಿಂಗ್ ಆಗಿದ್ದರಿಂದ ಒಪ್ಪಿಕೊಂಡೆ ಎನ್ನುತ್ತಾರೆ ಸುನಿಲ್ ಪುರಾಣಿಕ್.
![Sunil puranik with co star](https://etvbharatimages.akamaized.net/etvbharat/prod-images/kn-bng-05-manasaare-ravikishore-vis-ka10018_24022020175054_2402f_1582546854_660.jpg)
ನಿರ್ದೇಶಕ ರವಿ ಕಿಶೋರ್ ಮಾತನಾಡಿ, ಇತ್ತೀಚೆಗೆ ಪ್ರಸಾರವಾಗುತ್ತಿರುವ ಧಾರಾವಾಹಿಗಳಿಗಿಂತ ಮನಸಾರೆ ಧಾರಾವಾಹಿ ಹೇಗೆ ವಿಭಿನ್ನ..? ಹಾಗೂ ಪ್ರೇಕ್ಷಕರು ಏಕೆ ಧಾರಾವಾಹಿ ವೀಕ್ಷಿಸಬೇಕು ಎಂಬುದನ್ನು ಮನಸಾರೆ ಮಾತನಾಡಿದ್ದಾರೆ. ಈ ಧಾರಾವಾಹಿ ಇಂದಿನಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.