ಕಷ್ಟಕರ ಸನ್ನಿವೇಶದಲ್ಲಿ ನೂರು ದಿನವನ್ನು ಪೂರೈಸದೆ ಮನೆಯಿಂದ ಬಿಗ್ ಬಾಸ್ ಸ್ಪರ್ಧಿಗಳು ಹೊರ ಬಂದಿದ್ದಾರೆ. ನಿನ್ನೆ ಇಡೀ ದಿನ ಮನೆಯ ಸದಸ್ಯರನ್ನು ಒಂದೆಡೆ ಸೇರಿಸಿ ಕೊನೆಯ ಎರಡು ದಿನಗಳ ಎಪಿಸೋಡ್ ಶೂಟಿಂಗ್ ನಡೆಸಲಾಯಿತು. ನಂತರ ಮನೆಯ ಹನ್ನೊಂದು ಸದಸ್ಯರನ್ನು ತಮ್ಮ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ವಾಹಿನಿಯು ಕಳುಹಿಸಿಕೊಟ್ಟಿದೆ ಎನ್ನಲಾಗಿದೆ.
ಇದಕ್ಕೂ ಮೊದಲು, ಅಂದರೆ ಭಾನುವಾರ ಬಿಗ್ ಬಾಸ್ ಮನೆಯಲ್ಲಿ 10ನೇ ವಾರದ ಎಲಿಮಿನೇಷನ್ಗೆ ಮನೆಯ ಸದಸ್ಯರು ಸಿದ್ಧರಾಗಿ ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡಿದ್ದರು. ಆದರೆ ಅಲ್ಲಿ ನಡೆದದ್ದೇ ಬೇರೆ. ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಹೇಳಿದ ಪ್ರಕಾರ ಮನೆಯ ಸದಸ್ಯರಿಗೆ ವಿಷಯ ತಿಳಿಸಿ ಮನೆಯಿಂದ ಹೊರಗೆ ಕರೆತರಲಾಗುವುದು ಎಂದಿದ್ದರು.
ಅದರಂತೆ, ಮನೆಯಲ್ಲಿರುವ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಲಾಯಿತು. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೈಟ್ ಪ್ರಸಾರ ಮಾಡಲಾಯಿತು. ರಾಜ್ಯಾದ್ಯಂತ ಕೊರೊನಾ ಹೆಚ್ಚಾಗಿದ್ದು, ಲಾಕ್ಡೌನ್ ಮಾಡಲಾಗುತ್ತಿದೆ ಎಂಬ ಸಂದೇಶ ಮನೆಯ ಸದಸ್ಯರಿಗೆ ಆಘಾತ ಉಂಟು ಮಾಡಿತು.
ಈಗ ನಿಮ್ಮೆಲ್ಲರನ್ನೂ ಹೊರಗಡೆ ಕರೆಸುವ ಸಮಯ ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದಂತೆಯೇ ಎಲ್ಲರೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇಷ್ಟು ದಿನ ತಾನು ಗಟ್ಟಿ ಎಂದು ತೋರಿಸಿಕೊಳ್ಳುತ್ತಿದ್ದ ಪ್ರಶಾಂತ್ ಸಂಬರಗಿ ಕೂಡ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾರೆ. ಪ್ರಿಯಾಂಕಾ ತಿಮ್ಮೇಶ್, ಶುಭಾ ಪೂಂಜಾ ಕೂಡ ಜೋರಾಗಿ ಅತ್ತಿದ್ದಾರೆ. ಇನ್ನೇನು ತಾವು ಮನೆಯಿಂದ ಹೊರಡುವುದು ಖಚಿತ ಎಂದು ಗೊತ್ತಾದ ಬಳಿಕ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡಿದ್ದಾರೆ.