ಅಕ್ಕ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಅನುಪಮಾ ಗೌಡ, ಕಿರುತೆರೆ ವೀಕ್ಷಕರಿಗೆ ಮಗದಷ್ಟು ಹತ್ತಿರವಾಗಿದ್ದಾರೆ. ಬಿಗ್ ಬಾಸ್ ನಂತರ ನಿರೂಪಕಿಯಾಗಿ ಗುರುತಿಸಿಕೊಂಡ ಅವರು ಕನ್ನಡ ಕೋಗಿಲೆ ಜೊತೆಗೆ ಮಜಾಭಾರತದ ನಿರೂಪಕಿಯಾಗಿ ಜನಪ್ರಿಯತೆ ಪಡೆದಿದ್ದರು. ಅನುಪಮಾ ಅವರಿಗೆ ಓರ್ವ ತಂಗಿಯಿದ್ದು ಅವರು ಕೂಡಾ ಇದೀಗ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.
ಅನುಪಮಾ ಅವರ ತಂಗಿ ತೇಜಸ್ವಿನಿ ಕೂಡಾ ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಯಕಿ ಧಾರಾವಾಹಿಯಲ್ಲಿ ನಟಿಸಿದ್ದ ತೇಜಸ್ವಿನಿ ಇದೀಗ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ದ್ವಿಗಿಜಯ್ ಮಗಳಾಗಿ ನಟಿಸುತ್ತಿದ್ದಾರೆ. ತೇಜಸ್ವಿನಿ ಅವರನ್ನು ಕಂಡಾಗ ಅನೇಕ ಜನರು ನೀವು ಅನುಪಮಾ ಅವರ ತಂಗಿ ಹೌದಾ? ನಿಜವಾಗ್ಲೂನಾ ಎಂದು ಕೇಳುತ್ತಿದ್ದರು. ಅದಕ್ಕೆ ಅಸಲಿ ಕಾರಣವೂ ಇದೆ.
ಅನುಪಮಾ ಮತ್ತು ತೇಜಸ್ವಿನಿ ಜೊತೆಯಾಗಿ ಇರುವ ಫೋಟೋಗಳು ಕಾಣಸಿಗುವುದು ಅತಿ ವಿರಳ. ಅದೇ ಕಾರಣದಿಂದ ಅನುಪಮಾ ಗೌಡ ಇದೀಗ ತಮ್ಮ ತಂಗಿ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಇದು ನಮ್ಮಿಬ್ಬರ ಮೊದಲ ಫೋಟೋಶೂಟ್ ಎಂದರೆ ಸುಳ್ಳಾಗಲಾರದು. ಯಾಕೆಂದರೆ ನಾವಿಬ್ಬರೂ ಜೊತೆಯಾಗಿ ಇರುವ ಸರಿಯಾದ ಫೋಟೋಗಳೇ ಕಡಿಮೆ. ಅದೇ ಕಾರಣದಿಂದ ಇದೀಗ ಜೊತೆಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದೇವೆ" ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ ಅನುಪಮಾ ಗೌಡ.