ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಧಾರಾವಾಹಿಯಲ್ಲಿ ನಾಯಕಿ ಕಾವ್ಯಳಾಗಿ ಅಭಿನಯಿಸುತ್ತಿರುವ ವಿದ್ಯಾಶ್ರೀ ಜಯರಾಮ್ ಇಂದು ನಟಿಯಾಗಿ ಬಣ್ಞದ ಲೋಕದಲ್ಲಿ ಮಿಂಚುತ್ತಿದ್ದಾರೆ ಎಂದರೆ ಅದು ನಿಜಕ್ಕೂ ರೋಚಕವಾದ ಸಂಗತಿ ಸರಿ!
ಸಾಂಪ್ರದಾಯಿಕ ವಾತಾವರಣದಲ್ಲಿ ಹುಟ್ಟಿಬೆಳೆದ ವಿದ್ಯಾ ಅವರು ಜಯರಾಮ್ ಮತ್ತು ಪ್ರಭಾಮಣಿ ದಂಪತಿಗಳ ಮುದ್ದಿನ ಮಗಳು. ಅವರಿದ್ದ ವಾತಾವರಣದಲ್ಲಿ ನಟಿಸುವುದಂತೂ ದೂರದ ಮಾತು. ಆದರೆ ಜಯರಾಮ್ ಮತ್ತು ಪ್ರಭಾಮಣಿ ಮುದ್ದು ಮಗಳು ವಿದ್ಯಾಶ್ರೀಗೆ ಯಾವುದೇ ಕೊರತೆ ಉಂಟಾಗದಂತೆ ಬೆಳೆಸಿದರು. ಜೊತೆಗೆ ಮಗಳಿಗೆ ಉತ್ತಮ ಭವಿಷ್ಯ ದೊರಕಲಿ ಎಂಬ ಕಾರಣದಿಂದ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೌಟುಂಬಿಕ ಧಾರಾವಾಹಿ ವರಲಕ್ಷ್ಮಿ ಸ್ಟೋರ್ಸ್ ನಲ್ಲಿ ರಮ್ಯಾಳಾಗಿ ಅಭಿನಯಿಸುವ ಮೂಲಕ ನಟನಾ ಪಯಣ ಆರಂಭಿಸಿರುವ ವಿದ್ಯಾಶ್ರೀ ಮೊದಲ ಧಾರಾವಾಹಿಯಲ್ಲಿಯೇ ಪ್ರೇಕ್ಷಕರ ಮನ ಸೆಳೆದರು, ಆದರೆ ಅವರು ಬಣ್ಣದ ಲೋಕದಲ್ಲಿ ಮಿನುಗುತ್ತಿರುವುದನ್ನು ನೋಡಲು ಅಮ್ಮ ಇಲ್ಲ ಎಂಬ ಬೇಸರ ಆಕೆಗಿದೆ. ಅಂದಹಾಗೇ ವಿದ್ಯಾಶ್ರೀ ಜಯರಾಮ್ ಅವರು ನಟಿಯಾಗಿ ಗುರುತಿಸಿಕೊಳ್ಳುವ ಮೊದಲೇ ನೃತ್ಯಗಾರ್ತಿಯಾಗಿ ಛಾಪು ಮೂಡಿಸಿದ್ದರು. ಶಾಲಾ ಕಾಲೇಜು ದಿನಗಳಿಂದಲೂ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದ ವಿದ್ಯಾಶ್ರೀ ಅಂತರ್ ಶಾಲಾ, ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈಗಾಗಲೇ ಭರತನಾಟ್ಯದಲ್ಲಿ ಸೀನಿಯರ್ ಮುಗಿಸಿರುವ ಈಕೆ ಇದೀಗ ವಿದ್ವತ್ ಗೆ ತಯಾರಿ ನಡೆಸುತ್ತಿದ್ದಾರೆ. ಏವಿಯೇಷನ್ ನಲ್ಲಿ ಡಿಪ್ಲೋಮೋ ಕೋರ್ಸ್ ಮಾಡಿರುವ ವಿದ್ಯಾ ಗೋ ಏರ್ ಲೈನ್ಸ್ ನಲ್ಲಿ ಏರ್ ಹೋಸ್ಟೆಸ್ ಆಗಿ ಕೆಲಸವನ್ನು ಗಿಟ್ಟಿಸಿಕೊಂಡರು. ಸುಮಾರು ಮೂರು ವರ್ಷಗಳ ಕಾಲ ಗಗನಸಖಿಯಾಖಿ ಆಗಸದಿ ಹಾರಾಡಿದ ವಿದ್ಯಾಶ್ರೀಗೆ ಹೊಸತೇನಾದರೂ ಸಾಧಿಸಬೇಕು ಎಂಬ ಹಂಬಲ. ಆ ಸಮಯದಲ್ಲಿ ಸರಿಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದ ತಕಧಿಮಿತ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಬಂದ ಅವಕಾಶವನ್ನು ಬೇಡ ಎನ್ನದೇ ಮುನ್ನುಗ್ಗುವ ಮನಸ್ಸು ಮಾಡಿದ ವಿದ್ಯಾಶ್ರೀ ಅಗ್ನಿಸಾಕ್ಷಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ಅವರಿಗೆ ಡ್ಯಾನ್ಸ್ ಪಾರ್ಟನರ್ ಆಗಿ ಕಾಣಿಸಿಕೊಂಡರು. ಪ್ರತಿ ವಾರವೂ ವಿಭಿನ್ನ ನಮೂನೆಯ ನೃತ್ಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದ ಈ ಜೋಡಿ ಬರೋಬ್ಬರಿ ಹದಿನಾಲ್ಕು ರೌಂಡ್ ಪಾಸ್ ಆಗಿತ್ತು. ತಕಧಿಮಿತ ಶೋ ಬಳಿಕ ಮುಂದೇನು ಎಂದು ಯೋಚಿಸುತ್ತಿದ್ದ ವಿದ್ಯಾಶ್ರೀ ಆಯ್ದುಕೊಂಡದ್ದು ಬಣ್ಣದ ಲೋಕವನ್ನೇ. ಧಾರಾವಾಹಿಯಲ್ಲಿ ನಟಿಸುವ ಆಲೋಚನೆ ಮಾಡಿದ ಆಕೆಗೆ ಅಪ್ಪನ ಒಪ್ಪಿಗೆಯೂ ಸಿಕ್ಕಿತ್ತು. ನಂತರ ಇದ್ದ ಬದ್ದ ಆಡಿಶನ್ ಗಳಿಗೆ ಭಾಗವಹಿಸುತ್ತಿದ್ದ ಆಕೆಗೆ ಸಿಗುತ್ತಿದ್ದ ಉತ್ತರ ಓಕೆ ಹೇಳುತ್ತೇವೆ ಎಂಬುದಾಗಿತ್ತು. ಬದಲಿಗೆ ಎಲ್ಲೂ ಕೂಡಾ ಆಯ್ಕೆಯಾಗಿದ್ದೀರಿ ಎಂಬ ಮಾತು ಕೇಳಿ ಬರಲಿಲ್ಲ. ಕೊನೆಯದಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆಡಿಶನ್ ಕೊಟ್ಟ ಆಕೆ ಮುಂದೆ ಗಗನಸಖಿ ಯಾಗಿ ಹಾರುವ ನಿರ್ಧಾರ ಮಾಡಿದ್ದರು. ಅಷ್ಟರಲ್ಲಿ ಆಕೆಯ ಅದೃಷ್ಟ ಬಾಗಿಲು ತೆರೆಯಿತು. ಧಾರಾವಾಹಿಗೆ ಆಯ್ಕೆಯೂ ಆಗಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯಲ್ಲಿ ರಮ್ಯಾ ಆಗಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿರುವ ವಿದ್ಯಾಶ್ರೀ ಮೊದಲ ಬಾರಿಗೆ ಏಕಕಾಲಕ್ಕೆ ನೆಗೆಟಿವ್ ಮತ್ತು ಪಾಸಿಟಿವ್ ಪಾತ್ರಗಳಲ್ಲಿ ನಟಿಸಿದ್ದರು. ಮುಂದೆ ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯ ನಂತರ ಇದೀಗ ಉದಯವಾಹಿನಿಯ ಕಾವ್ಯಾಂಜಲಿ ಧಾರಾವಾಹಿಯ ಕಾವ್ಯ ಳಾಗಿ ಅಭಿನಯಿಸುತ್ತಿರುವ ವಿದ್ಯಾಶ್ರೀ ಗೆ ಈಗಾಗಲೇ ಸಿನಿಮಾದಿಂದ ಅವಕಾಶಗಳು ದೊರೆಯುತ್ತಿದೆ. ಆದೆಡ ಸದ್ಯಕ್ಕೆ ತನ್ನ ಚಿತ್ತ ಏನಿದ್ದರೂ ಕಿರುತೆರೆ ಕಡೆಗೆ ಎನ್ನುವ ಆಕೆ ಇದೀಗ ಬಣ್ಣದ ಲೋಕವನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಅವರಿಗೆ ಇಲ್ಲಿಯೇ ಮುಂದುವರಿಯುವ ಬಯಕೆ.