ಕನ್ನಡ ಚಿತ್ರರಂಗ ಕಂಡ ಮಹೋನ್ನತ ಪ್ರತಿಭೆ ದಿ. ಶಂಕರ್ ನಾಗ್. ಇಂದು 'ಆಟೋ ರಾಜ'ನ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹಿರಿಯ ನಟ ಶ್ರೀನಿವಾಸಮೂರ್ತಿ ಶಂಕ್ರಣ್ಣನ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇಷ್ಟು ವರ್ಷವಾದರೂ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನೂ ರಾಜ್ಯ ಸರ್ಕಾರ ಸ್ಥಾಪಿಸದೆ ಇರುವುದು ಬೇಸರ ತರಿಸಿದೆ. ಅಲ್ಲದೆ ಈ ವರ್ಷವಾದರೂ ಶಂಕರ್ ನಾಗ್ ಹೆಸರಿನಲ್ಲಿ ಯುವ ಸೃಜನಶೀಲ ನಿರ್ದೇಶಕರ ಮೊದಲ ಅತ್ಯುತ್ತಮ ಚಿತ್ರಕ್ಕೆ ಈ ಪ್ರಶಸ್ತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಶ್ರೀನಿವಾಸಮೂರ್ತಿ ತಮ್ಮ 40 ವರ್ಷದ ವೃತ್ತಿ ಜೀವನದಲ್ಲಿ ಕಂಡ ಅತ್ಯುತ್ತಮ ಪ್ರತಿಭೆ ಶಂಕರ್ ನಾಗ್ ಎಂದು ಬಣ್ಣಿಸುತ್ತಾರೆ. ಹಾಗೆ ಡಾ. ರಾಜ್, ಡಾ. ವಿಷ್ಣು, ಡಾ. ಅಶ್ವಥ್ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತಿದೆ. ಹಾಗೆಯೇ ಶಂಕರ್ ನಾಗ್ ಹೆಸರಿನಲ್ಲೂ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ನಟ ಶ್ರೀನಿವಾಸಮೂರ್ತಿ ಹಾಗೂ ಶಂಕರ್ ನಾಗ್ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯ ಮಾಡಿದ್ದರು. ಐ ಲವ್ ಯು ಸಿನಿಮಾ ಹಾಗೂ ಭಲೇ ಚತುರ ಸಿನಿಮಾದಲ್ಲಿಯೂ ಶಂಕ್ರಣ್ಣನ ಜೊತೆ ಸ್ರ್ಕೀನ್ ಶೇರ್ ಮಾಡಿದ್ದಾರೆ.
ಸದಾ ಹೊಸತನಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದ ಚೇತನ ಶಂಕರ್ ನಾಗ್. ಅವರಿಗೆ ಸರಿಸಾಟಿ ಯಾರು ಇಲ್ಲ. ಈಗಲಾದರೂ ರಾಜ್ಯ ಸರ್ಕಾರ ಕಣ್ಣು ತೆರೆದು ಇವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂಬುದು ಹಿರಿಯ ನಟ ಶ್ರೀನಿವಾಸಮೂರ್ತಿಯವರ ಆಶಯವಾಗಿದೆ.