ಒಂದು ಕಾಲದಲ್ಲಿ ನಿರ್ದೇಶಕರಾಗಿ, ಪೋಷಕ ನಟರಾಗಿ ಹೆಸರು ಮಾಡಿದ ಎಷ್ಟೋ ಮಂದಿ ಈಗ ಚಿಕಿತ್ಸೆಗಾಗಿ ಹಣ ಇಲ್ಲದೆ ಕಷ್ಟಪಡುತ್ತಿದ್ದಾರೆ. ಕೆಲವರು ಪರಿಚಯಸ್ಥರ ಹೆಸರು ಹೇಳಿಯೋ, ತಮ್ಮ ಚಿತ್ರರಂಗದ ಹಿನ್ನೆಲೆ ಹೇಳಿಯೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ದೊಡ್ಡ ಮೊತ್ತದ ಬಿಲ್ ಕಟ್ಟಲು ಕಷ್ಟಪಡುತ್ತಾರೆ. ಅಂತವರಲ್ಲಿ ನಟ, ನಿರ್ದೇಶಕ ವಿಶ್ವನಾಥ್ ಕೂಡಾ ಒಬ್ಬರು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಪಡುವಾರಳ್ಳಿ ಪಾಂಡವರು' ಚಿತ್ರದ ಮೂಲಕ ನಟನಾಗಿ ಅಭಿನಯ ಆರಂಭಿಸಿದ ವಿಶ್ವನಾಥ್ ಇಂದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಿಜಯನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು ಆಸ್ಪತ್ರೆ ಬಿಲ್ ಕಟ್ಟಲೂ ಶಕ್ತರಾಗಿಲ್ಲ. ವಿಶ್ವನಾಥ್ ಡಾ. ರಾಜ್ಕುಮಾರ್ ಜೊತೆ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶನ ಸೇರಿದಂತೆ ತೆಲುಗು, ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಮ್ಗೋಪಾಲ್ ವರ್ಮಾ ನಿರ್ದೇಶನದಲ್ಲಿ ನಾಗಾರ್ಜುನ ನಟನೆಯ 'ಶಿವ' ಚಿತ್ರದಲ್ಲೂ ವಿಶ್ವನಾಥ್ ಪೋಷಕ ಪಾತ್ರದಲ್ಲಿ ನಟಿಸಿದ್ದರು.
ಮಾಜಿ ಸಿಎಂ ಹೆಚ್ಡಿಕೆ ನಿರ್ಮಾಣದಲ್ಲಿ ನವರಸ ನಾಯಕ ಜಗ್ಗೇಶ್ ಅಭಿನಯಿಸಿದ್ದ 'ಜಿತೇಂದ್ರ' ಚಿತ್ರವನ್ನು ವಿಶ್ವನಾಥ್ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ಐ ಪೋನ್ನಲ್ಲಿ ತಯಾರಾದ ಸಿಂಗಲ್ ಶಾಟ್ 'ಸಹಿಷ್ಟು' ಚಿತ್ರದಲ್ಲಿ ಕೂಡಾ ವಿಶ್ವನಾಥ್ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕನಾಗಿ ಮಿಂಚಿದ ಈ ನಟ ಈಗ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ವಿಶ್ವನಾಥ್ ಆರೋಗ್ಯಕ್ಕೆ ಹಣ ಸಹಾಯ ಮಾಡಲು ಬಯಸುವವರು Vishwanath, A/c no: 0442010062749, IFSC code:0000440 Syndicate bank ಗೆ ತಲುಪಿಸಬಹುದು.