ಚಿರು ನಿಧನದ ಬಳಿಕ ನಟನೆಯಿಂದ ದೂರ ಉಳಿದುಕೊಂಡಿದ್ದ ಮೇಘನಾ ರಾಜ್ ಇದೀಗ ಮತ್ತೆ ನಟಿಸಲು ಸಜ್ಜಾಗಿದ್ದು, ನಾಳೆ ಚಿರಂಜೀವಿ ಸರ್ಜಾ ಹುಟ್ಟಹಬ್ಬದ ಹಿನ್ನೆಲೆ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ತಾರೆಯರಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಜೋಡಿ ಕೂಡ ಒಂದು. ಆದರೆ, ಮದುವೆಯಾದ ಕೆಲವೇ ವರ್ಷಗಳಲ್ಲಿ ಚಿರು ಅಕಾಲಿಕ ಮರಣಹೊಂದಿದ್ದು, ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿತ್ತು.
ಚಿರಂಜೀವಿ ನಿಧನದ ಬಳಿಕ ಮೇಘನಾ ರಾಜ್ ಜೀವನದಲ್ಲಿ ಹೊಸ ಭರವಸೆ ಮೂಡಿಸಿದ್ದು, ಮಗ ರಾಯನ್ ರಾಜ್ ಸರ್ಜಾ. ಕೆಲವು ತಿಂಗಳ ಹಿಂದೆಯಷ್ಟೇ ಮೇಘನಾ ರಾಜ್ ಅದ್ಧೂರಿಯಾಗಿ ಮಗನ ನಾಮಕರಣ ಮಾಡಿದ್ದರು. ಇದೀಗ ಅಕ್ಟೋಬರ್ 17 ರಂದು ಚಿರಂಜೀವಿ ಸರ್ಜಾ ಹುಟ್ಟಿದ ದಿನದ ನಿಮಿತ್ತ ಮೇಘನಾ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಹೆಸರಿಡದ ಚಿತ್ರ ಸೆಟ್ಟೇರುತ್ತಿದೆ.
![ಮೇಘನಾ ರಾಜ್](https://etvbharatimages.akamaized.net/etvbharat/prod-images/kn-bng-01-chiru-birthday-dina-meghana-raju-new-cinemage-pooje-7204735_16102021104031_1610f_1634361031_401.jpg)
ಪಿ.ಬಿ.ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರ ಮೂಡಿಬರಲಿದೆ. ಈ ಚಿತ್ರವನ್ನು ಚಿರಂಜೀವಿ ಸರ್ಜಾ ಅವರ ಸ್ನೇಹಿತ ಪನ್ನಗಾಭರಣ ನಿರ್ಮಾಣ ಮಾಡಲಿದ್ದಾರೆ. ಅವರ ಜೊತೆ ಸಂಗೀತ ನಿರ್ದೇಶಕ ವಾಸುಕಿ ವೈಭವ್, ಹೊಸ ನಿರ್ದೇಶಕ ವಿಶಾಲ್ ಕೈ ಜೋಡಿಸುತ್ತಿದ್ದಾರೆ.
ನಾಳೆ ಖಾಸಗಿ ಹೋಟೆಲ್ನಲ್ಲಿ ಸಿನಿಮಾ ಸೆಟ್ಟೇರುತ್ತಿದ್ದು, ನಿರ್ದೇಶಕ ಟಿ.ಎಸ್.ನಾಗಾಭರಣ, ನಟ ಸುಂದರರಾಜ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಆಗಮಿಸಿ ಶುಭ ಕೋರಲಿದ್ದಾರೆ.
ಇನ್ನು ಮೇಘನಾ ರಾಜ್ ತಾಯಿ ಆದ್ಮಲೇ ಪೂರ್ಣ ಪ್ರಮಾಣವಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಸದ್ಯಕ್ಕೆ ಚಿತ್ರದ ಟೈಟಲ್ ಏನು?, ಈ ಚಿತ್ರದಲ್ಲಿ ಯಾವ ಯಾವ ನಟರು ಹಾಗೂ ತಂತ್ರಜ್ಞಾನರು ಇದ್ದಾರೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.