ಸುದೀಪ್ ಕಳೆದ ನಾಲ್ಕು ತಿಂಗಳ ಹಿಂದೆ 'ಫ್ಯಾಂಟಮ್' ಚಿತ್ರೀಕರಣಕ್ಕಾಗಿ ಹೈದರಾಬಾದ್ಗೆ ಹೋದವರು ಬರೋಬ್ಬರಿ ನಾಲ್ಕು ತಿಂಗಳ ನಂತರ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮಧ್ಯದಲ್ಲಿ 2-3 ಬಾರಿ ಬೆಂಗಳೂರಿಗೆ ಬಂದದ್ದು ಬಿಟ್ಟರೆ ಹೈದರಾಬಾದ್ನಲ್ಲೇ ನೆಲೆಸಿದ್ದರು. ಹಾಗಾಗಿ ಸಿನಿಮಾ ಯಾವಾಗ ಮುಗಿಯಲಿದೆಯೋ, ಕಿಚ್ಚ ಯಾವಾಗ ಬೆಂಗಳೂರಿಗೆ ಬರುತ್ತಾರೋ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸುದೀಪ್ ವಾಪಸ್ ಬಂದಿರುವುದು ಸಂತೋಷ ತಂದಿದೆ.
ಹೈದರಾಬಾದ್ನಲ್ಲಿ 'ಫ್ಯಾಂಟಮ್' ಚಿತ್ರೀಕರಣ ಮುಗಿದಿದೆ. 4 ತಿಂಗಳಿಂದ ಚಿತ್ರತಂಡ ಹೈದರಾಬಾದ್ನಲ್ಲೇ ನೆಲೆಸಿ ಸೆಟ್ ಹಾಕಿ, ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾ ಚೆನ್ನಾಗಿ ರೂಪುಗೊಂಡಿದ್ದರ ಬಗ್ಗೆ ಚಿತ್ರತಂಡ ಬಹಳ ಖುಷಿಯಾಗಿದೆ. ಇದರ ಬಗ್ಗೆ ಟ್ವಿಟರ್ನಲ್ಲಿ ಹೇಳಿಕೊಂಡಿರುವ ಸುದೀಪ್, ''ಹೈದರಾಬಾದ್ನಲ್ಲಿ ಮಾಡಬೇಕಿದ್ದ ಚಿತ್ರೀಕರಣ ಮುಗಿದಿದೆ. ಇದೊಂದು ಅದ್ಭುತ ಅನುಭವ. ಯಾರೂ ನಿರೀಕ್ಷೆ ಮಾಡದಿದ್ದ ಸಂದರ್ಭದಲ್ಲಿ ಚಿತ್ರೀಕರಣ ಆರಂಭಿಸಿ, ಅಂದುಕೊಂಡಂತೆ ಚಿತ್ರೀಕರಣ ಮುಗಿಸಿದ್ದೇವೆ. ನಿಜಕ್ಕೂ ಇದೊಂದು ಅದ್ಭುತ ಸಾಧನೆ'' ಎಂದು ಬರೆದುಕೊಂಡಿದ್ದಾರೆ.
ಶೇ 75ರಷ್ಟು ಚಿತ್ರೀಕರಣ ಮಾತ್ರ ಮುಗಿದಿದ್ದು, ಇನ್ನೂ ಶೇ 25 ಭಾಗದ ಚಿತ್ರೀಕರಣ ಬಾಕಿ ಇದೆ. ಅದಕ್ಕಾಗಿ ಸದ್ಯದಲ್ಲೇ ಕಾರ್ಕಳ ಅಥವಾ ಕೇರಳದ ಕಡೆ ಹೋಗಿ ಒಂದು ಪುರಾತನ ಮನೆಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬರಲು ಚಿತ್ರತಂಡ ಸಜ್ಜಾಗಿದೆ. ಈ ವರ್ಷದ ಕೊನೆಯ ವೇಳೆಗೆ ಚಿತ್ರೀಕರಣ ಮುಗಿಯಬಹುದು ಎಂದು ಅಂದಾಜಿಸಲಾಗಿದೆ. 'ಫ್ಯಾಂಟಮ್' ಚಿತ್ರದಲ್ಲಿ ವಿಕ್ರಮ್ ರೋಣ ಎಂಬ ಪಾತ್ರದಲ್ಲಿ ಸುದೀಪ್ ನಟಿಸಿದ್ದು, ಶ್ರದ್ಧಾ ಶ್ರೀನಾಥ್, ನೀತಾ ಅಶೋಕ್, ನಿರೂಪ್ ಭಂಡಾರಿ ಮುಂತಾದವರು ನಟಿಸಿದ್ದಾರೆ. ಅನೂಪ್ ಭಂಡಾರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.