ಚಂದನವನದ ದಂತಕತೆ, ಕನ್ನಡದ 'ಚಿತ್ರಬ್ರಹ್ಮ' ಅಂತಾನೇ ಪ್ರಸಿದ್ಧರಾಗಿರುವವರು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಈ ಹೆಸರು ಸ್ಯಾಂಡಲ್ವುಡ್ ಮಾತ್ರವಲ್ಲ, ಇಡೀ ದೇಶದ ಚಿತ್ರರಂಗಕ್ಕೆ ಚಿರಪರಿಚಿತವಾದದ್ದು. ಧ್ರುವತಾರೆ, ಸ್ಟಾರ್ ಮೇಕರ್, ಕಲಾ ಶಿಲ್ಪಿ, ಚಿತ್ರಬ್ರಹ್ಮ, ಕಲ್ಪನಾ ಜೀವಿ ಹೀಗೆ ನಾನಾ ಬಿರುದಾವಳಿಗಳಿಂದ ಇವರು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸೃಜನಾತ್ಮಕ ನಿರ್ದೇಶಕನಿಗೆ ಇಂದು 86ನೇ ವರ್ಷದ ಹುಟ್ಟುಹಬ್ಬ!
ಚಿತ್ರೋದ್ಯಮದ ಹಲವು ಗಣ್ಯರು ಈ ದಿಗ್ಗಜ ನಿರ್ದೇಶಕನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಿಶಬ್ ಶೆಟ್ಟಿ ಕಲ್ಪನೆಯ ಕಥಾಸಂಗಮ ಚಿತ್ರತಂಡ ಪುಟ್ಟಣ್ಣ ಕಣಗಾಲ್ ಅವರಿಗೆ ವಿಶೇಷ ರೀತಿಯಲ್ಲಿ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದೆ.
ಕನ್ನಡದ ಮೇರು ನಟರಾದ ರೆಬಲ್ ಸ್ಟಾರ್ ಅಂಬರೀಶ್, ಸಾಹಸಸಿಂಹ ವಿಷ್ಣುವರ್ಧನ್ ಹಾಗು ನಟಿ ಆರತಿ ಸೇರಿದಂತೆ ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕಣಗಾಲ್ ಅವರಿಗೆ ಸಲ್ಲಲೇಬೇಕು. ಪುಟ್ಟಣ್ಣ ಕಣಗಾಲ್ ಸಿನಿಮಾಗಳಂದ್ರೆನೇ ಅದೊಂದು ಹಿಸ್ಟರಿ! ಈ ಕಲಾಕಾರನ ಸಿನಿಮಾಗಳು ಇಂದಿಗೂ ಜನಮಾನಸದಲ್ಲಿ ಆಳವಾಗಿ ಬೇರೂರಿವೆ.
ಏಳು ನಿರ್ದೇಶಕರು, ಏಳು ಮ್ಯೂಜಿಕ್ ಡೈರೆಕ್ಟರ್ಸ್, ಏಳು ಸಿನಿಮಾಟೋಗ್ರಾಫರ್ ಸೇರಿ ಮಾಡಿರೋ ಕನ್ನಡದ ಸಿನಿಮಾ 'ಕಥಾಸಂಗಮ'. ಈ ಸಿನಿಮಾವನ್ನು ಚಿತ್ರತಂಡ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸಿದೆ. ರಿಶಬ್ ಶೆಟ್ಟಿ ನಿರ್ಮಿಸುತ್ತಿರುವ ಸಿನಿಮಾ ಇದೇ ಡಿಸೆಂಬರ್ 6ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.