ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಫಿಲಂಫೇರ್ ಸೌತ್ ಪ್ರಶಸ್ತಿ ಕಾರ್ಯಕ್ರಮ ಅಂದ್ರೆ ಫಿಲಂಫೇರ್ ಪ್ರಶಸ್ತಿ ಸಮಾರಂಭ. ಫಿಲಂ ಇಂಡಸ್ಟ್ರಿಯ ತಾರೆಯರು ಒಟ್ಟಾಗುವ ಸಂಭ್ರಮದ ಸಮಾರಂಭ ಇದು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ 67ನೇ ಫಿಲಂಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಿನಿಮಾ ನಿರ್ಮಾಪಕ ಕಮರ್ ಫಿಲಂ ಫ್ಯಾಕ್ಟರಿ ಸಹಯೋಗದೊಂದಿಗೆ ಈ ಸಮಾರಂಭ ನಡೆಯುತ್ತಿದೆ. ಹೀಗಾಗಿ ಫಿಲಂಫೇರ್ ಸಂಪಾದಕರಾದ ಜಿತೇಶ್ ಪಿಳ್ಳೈ, ಬಹುಭಾಷಾ ನಟಿ ಪೂಜಾ ಹೆಗ್ಡೆ, ಕಮರ್ ಫಿಲಂ ಫ್ಯಾಕ್ಟರಿಯ ಕಮರ್ ಹಾಗೂ ನಟಿ ತಾರಾ ಅನುರಾಧ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಮಾರ್ಚ್ ಮೊದಲ ವಾರದಲ್ಲಿ ಎರಡು ದಿನಗಳ ಕಾಲ ಈ ಸಮಾರಂಭ ನಡೆಯಲಿದೆ. ಅನೇಕ ಮನೋರಂಜನಾ ಕಾರ್ಯಕ್ರಮಗಳು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮತ್ತಷ್ಟು ಶೃಂಗಾರಗೊಳಿಸಲಿದೆ ಎಂದು ಜಿತೇಶ್ ಪಿಳ್ಳೈ ತಿಳಿಸಿದರು.
ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಫಿಲಂಫೇರ್ ಪ್ರಶಸ್ತಿ ಸಮಾರಂಭ ನಡೆದಿಲ್ಲ. ಕಳೆದ ಬಾರಿ ಈ ಸಮಾರಂಭ ನಮ್ಮ ಕೈ ತಪ್ಪಿತ್ತು. ನಾವು ಈ ಸಲ ನಮ್ಮ ಊರಿನಲ್ಲೇ ನಡೆಯಬೇಕೆಂದು ಕೇಳಿಕೊಂಡೆವು. 2022ರ ಮಾರ್ಚ್‌ನಲ್ಲಿ ಇದೇ ಮೊದಲ ಬಾರಿಗೆ ಫಿಲಂ ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಮ್ಮ ಕಮರ್ ಫ್ಯಾಕ್ಟರಿ ಸಹಯೋಗದೊಂದಿಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಕಮರ್ ಹೇಳಿದರು.
ಇದನ್ನೂ ಓದಿ: ಮ್ಯಾನೇಜರ್-ಅಭಿಮಾನಿ ಹೊಡೆದಾಟ ಕೇಸ್.. ನಟ ವಿಜಯ್ ಸೇತುಪತಿ ವಿರುದ್ಧ ಮಾನನಷ್ಟ ಮೊಕದ್ದಮೆ
ಪ್ರತಿಭಾವಂತ ಕಲಾವಿದರ ಹಾಗೂ ತಂತ್ರಜ್ಞರ ಸಮ್ಮಿಲನವಾಗುವ ಮಾಹಾ ವೇದಿಕೆ ಈ ಫಿಲಂಫೇರ್ ಪ್ರಶಸ್ತಿ ಸಮಾರಂಭ. 66 ವರ್ಷಗಳ ಬಳಿಕ ನಮ್ಮ ಬೆಂಗಳೂರಿನಲ್ಲಿ ಈ ಸಮಾರಂಭ ನಡೆಯುತ್ತಿರುವುದು ತುಂಬಾ ಸಂತೋಷ. ಯಾವುದೇ ಕೊರತೆ ಬಾರದ ಹಾಗೆ ಕಾರ್ಯಕ್ರಮವನ್ನು ಕಮರ್ ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ. ಸಮಾರಂಭ ಯಶಸ್ವಿಯಾಗಲಿ ಎಂದು ನಟಿ ತಾರಾ ಅನುರಾಧ ಸಂತಸ ವ್ಯಕ್ತಪಡಿಸಿದರು.
ಸಮಾರಂಭದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ, ನಿರ್ಮಾಪಕ ಉಮೇಶ್ ಬಣಕಾರ್, ಶಾಸಕ ಬೈರತಿ ಸುರೇಶ್, ನಟಿಯರಾದ ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೂಣಚ್ಛ ಮುಂತಾದ ಗಣ್ಯರು ಉಪಸ್ಥಿತರಿದ್ದರು.