ಹಿರಿಯ ನಟ ರಮೇಶ್ ಅರವಿಂದ್ ವಿಭಿನ್ನ ಸಿನಿಮಾಗಳಿಂದ, ವಿಭಿನ್ನ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ. ಇವರ 103ನೇ ಚಿತ್ರವಾದ ''ಶಿವಾಜಿ ಸುರತ್ಕಲ್ 2'' ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರಂನ ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.
ರಮೇಶ್ ಅರವಿಂದ್ ಅವರ 103ನೇ ಚಿತ್ರ ಎನ್ನುವುದು ಈ ಚಿತ್ರದ ವಿಶೇಷತೆಯಾಗಿದ್ದು, ರಾಧಿಕ ನಾರಾಯಣ್, ಮೇಘನ ಗಾಂವ್ಕರ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ತಾರಾಗಣದಲ್ಲಿದ್ದಾರೆ. ಇದರ ಜೊತೆಗೆ ಮಗಳು ಜಾನಕಿ ಧಾರಾವಾಹಿಯ ಮೂಲಕ ಮನೆ ಮಾತಾಗಿರುವ ರಾಕೇಶ್ ಮಯ್ಯ ಕೂಡ ಇದ್ದಾರೆ. ಈಗಷ್ಟೇ ಟ್ರೈನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರ ಚಿತ್ರದುದ್ದಕ್ಕು ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ. ಬಿಗ್ ಬಾಸ್ ಖ್ಯಾತಿಯ ವಿನಾಯಕ್ ಜೋಷಿ ಕೂಡ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇವರದ್ದು ರಫ್ & ಟಫ್ ಪೊಲೀಸ್ ಅಧಿಕಾರಿ ಪಾತ್ರವಾಗಿದ್ದು ಚಿತ್ರದ ಕಥೆಗೆ ಮಹತ್ವದ ತಿರುವು ನೀಡಲಿದೆ.
ಆಕಾಶ್ ಶ್ರೀವತ್ಸ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಉದಯೋನ್ಮುಖ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನಕುಲ್ ಅಭಯಂಕರ್ ಈ ಹಿಂದೆ ಕನ್ನಡ್ ಗೊತ್ತಿಲ್ಲ ಹಾಗು ಬಿಡುಗಡೆಗೆ ಸಿದ್ಧವಾಗುತ್ತಿರುವ ಲವ್ ಮಾಕ್ಟೇಲ್-2 ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದಕ್ಕೂ ಮೊದಲು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಬಳಿ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದು, ಇತ್ತೀಚೆಗೆ ಬಹಳಷ್ಟು ಹೆಸರು ಮಾಡಿದ ಪರಮ ಸುಂದರಿ ಹಾಡಿಗೂ ಸಹ ಪ್ರೋಗ್ರಾಮರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಈಗ ಇವರು ಈ ಚಿತ್ರ ತಂಡಕ್ಕೆ ಸೇರಿದ್ದು, ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಾಜಿ ಸುರತ್ಕಲ್-2 ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.
ಶಿವಾಜಿ ಸುರತ್ಕಲ್-2 ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಶುರುವಾಗಲಿದೆ.