ಡಾ. ರಾಜ್ಕುಮಾರ್ ಅವರ 92ನೇ ಹುಟ್ಟುಹಬ್ಬವನ್ನು "ಸಲಗ" ಚಿತ್ರತಂಡ ಸೆಲೆಬ್ರೇಟ್ ಮಾಡಿದೆ. ಲಾಕ್ಡೌನ್ ಇರುವ ಕಾರಣ ನಿಯಮಗಳನ್ನು ಪಾಲಿಸಿ ಸೌತ್ ಎಂಡ್ ಸರ್ಕಲ್ನಲ್ಲಿರುವ ಅಣ್ಣಾವ್ರ ಪುತ್ಥಳಿಗೆ ದುನಿಯಾ ವಿಜಯ್, ಡಾಲಿ ಧನಂಜಯ್ ಹಾಗೂ ಮಾಜಿ ಕಾರ್ಪೋರೇಟರ್ ಎನ್.ಆರ್.ರಮೇಶ್ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ "ಬಂಗಾರದ ಮನುಷ್ಯನ" ಹುಟ್ಟುಹಬ್ಬ ಅಚರಿಸಿದ್ರು.
ಡಾ. ರಾಜ್ ಹುಟ್ಟುಹಬ್ಬದ ಅಂಗವಾಗಿ ಸುಮಾರು 400 ಸಿನಿಮಾ ಕಾರ್ಮಿಕರಿಗೆ ಸಲಗ ಚಿತ್ರತಂಡ ದಿನಸಿ ಕಿಟ್ ವಿತರಿಸಿತು. ಇನ್ನು ಈ ವೇಳೆ ಮಾತನಾಡಿದ ನಟ ದುನಿಯಾ ವಿಜಯ್, ನಾವ್ಯಾರೂ ಅಣ್ಣಾವ್ರ ಅರ್ಧದಷ್ಟು ಅಭಿಮಾನಿಗಳನ್ನು ಗಳಿಸೋಕೆ ಆಗಲ್ಲ. ನಾವೆಲ್ಲಾ ಅಣ್ಣಾವ್ರ ಸರಳತೆಯನ್ನು ಬೆಳೆಸಿಕೊಳ್ಳಬೇಕು. ಈ ಜಗತ್ತಿಗೆ ಸೂರ್ಯ ಒಬ್ಬನೇ. ಅದೇ ರೀತಿ ಚಿತ್ರರಂಗಕ್ಕೆ ಅಣ್ಣಾವ್ರು ಒಬ್ಬರೇ. ನಾವೆಲ್ಲಾ ಮಧ್ಯದಲ್ಲಿ ಬಂದು ಹೋಗುವವರು. ಅವರ ಮಾರ್ಗದರ್ಶನದಲ್ಲಿ ಬದುಕಬೇಕು. ಅಣ್ಣಾವ್ರ ಚಿತ್ರಗಳನ್ನು ನೋಡಿ ಬೆಳೆದಿದ್ದೇವೆ ಎಂದು ಕರಿ ಚಿರತೆ ದುನಿಯಾ ವಿಜಿ ಹೇಳಿದ್ರು.
ನಂತರ ಮಾತನಾಡಿದ ಡಾಲಿ ಧನಂಜಯ್, ಕನ್ನಡಕ್ಕೆ ಇನ್ನೊಂದು ಹೆಸರೇ ಅಣ್ಣಾವ್ರು. ಅಭಿಮಾನಿಗಳ ಪಾಲಿಗೆ ಅಣ್ಣಾವ್ರು ದೇವರಾಗಿದ್ದಾರೆ. ಎಲ್ಲರನ್ನು ಸಮನಾಗಿ ನೋಡುತ್ತಿದ್ದರು. ಅವರು ಮನೆ ಮನೆಯ ಭಾವನಾತ್ಮಕ ಜೀವ ಎಂದು ಡಾಲಿ ಹೇಳಿದರು.