ತಾನೂ ಬೆಳೆದು ತನ್ನ ಸುತ್ತಮುತ್ತ ಇರುವವರನ್ನೂ ಕೈ ಹಿಡಿಯುವ ಕ್ರೇಜಿಸ್ಟಾರ್ ರವಿಚಂದ್ರನ್ ಎಂದೂ ಹಣದ ಹಿಂದೆ ಹೋದವರಲ್ಲ. ಆದರೆ, ಈಗ ಈ ಕಲಾವಿದನಿಗೆ ತನ್ನ ಮಗಳ ಮದುವೆಯಿಂದ ಹಣದ ಮಹತ್ವ ಗೊತ್ತಾಗಿದೆಯಂತೆ. ಇನ್ನು ಮುಂದೆ ನಾನು ಚಿತ್ರರಂಗದಲ್ಲಿ ಹಣ ಮಾಡ್ತೀನಿ ಎಂದು ಧೈರ್ಯವಾಗಿ ಹೇಳುತ್ತಾರೆ ರವಿಚಂದ್ರನ್. ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ 'ಬಯಲಾಟದ ಭೀಮಣ್ಣ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಚಾಮುಂಡೇಶ್ವರಿ ಸ್ಟುಡಿಯೋಗೆ ಆಗಮಿಸಿದ್ದ ವೇಳೆ ಕ್ರೇಜಿಸ್ಟಾರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
'ಚಾಮುಂಡೇಶ್ವರಿ ಸ್ಟುಡಿಯೋಗೂ ನನಗೂ ಬಹಳ ಅವಿನಾಭಾವ ಸಂಬಂಧವಿದೆ. ಸ್ಟುಡಿಯೋದಲ್ಲಿ ಕೊನೆಯದಾಗಿ ಶೂಟಿಂಗ್ ಆಗಿದ್ದು ನನ್ನ 'ರಣಧೀರ' ಸಿನಿಮಾ. ಇಲ್ಲಿಗೆ ಬಂದರೆ ಹಳೆಯದ್ದೆಲ್ಲಾ ನೆನಪಾಗುತ್ತದೆ ಎಂದರು. ಏನೂ ಗೊತ್ತಿಲ್ಲದೆ ಚಿತ್ರರಂಗಕ್ಕೆ ಬಂದು ತೋಚಿದ್ದನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಸಿನಿಮಾ ಕ್ಷೇತ್ರದಲ್ಲಿ ಏನನ್ನೂ ಮಾಡಬೇಕು ಅಂದುಕೊಂಡವನಲ್ಲ. ಆದರೆ, ಯಾವುದೇ ಕೆಲಸ ಮಾಡಬೇಕಾದರೂ ಶ್ರದ್ಧೆ, ಪ್ರೀತಿಯಿಂದ ಮಾಡುವುದನ್ನಷ್ಟೇ ನಾನು ಕಲಿತಿರುವುದು' ಎಂದು ಹೇಳಿದರು.
ನನಗೆ ಗಾಢ್ ಮತ್ತು ಫಾದರ್ ಎರಡು ಒಬ್ಬರೇ. ಅವರೇ ನನ್ನ ತಂದೆ ವೀರಾಸ್ವಾಮಿ. ಯಾರು ಬೇಕಾದರೂ ಕನಸು ಕಾಣಬಹುದು. ಕನಸು ಕಾಣುವವನೇ ನಿಜವಾದ ಸಾಹುಕಾರ. ಕನಸು ಕಾಣುವವರಿಗಿಂತ ದೊಡ್ಡ ಸಾಹುಕಾರ ಯಾರೂ ಇಲ್ಲ. ನನಗೆ ಬಹಳ ಹತ್ತಿರವಾದ ಬಹಳ ನೋವು ಕೊಟ್ಟ ಸಿನಿಮಾ ಎಂದರೆ ಅದು 'ಏಕಾಂಗಿ'. ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಯಾವುದೋ ಒಂದು ಮೂಲೆಯಲ್ಲಿ ಚೇರ್ ಹಾಕಿಕೊಂಡು ಕುಳಿತು ಆ್ಯಕ್ಷನ್-ಕಟ್ ಹೇಳುತ್ತಾರೆ. ಆದರೆ, ನಾನು ಈವರೆಗೂ ಒಬ್ಬ ನಿರ್ದೇಶಕನಾಗಿ ಚೇರ್ ಹಾಕಿ ಕುಳಿತುಕೊಂಡವನಲ್ಲ. ಆರ್ಟಿಸ್ಟ್ಗಳ ಎದುರು ನಿಂತುಕೊಂಡೇ ಆ್ಯಕ್ಟ್ ಮಾಡಿಸಿ ಕೆಲಸ ಮಾಡಿಸಿ ನನಗೆ ಅಭ್ಯಾಸ ಎಂದು ಕ್ರೇಜಿಸ್ಟಾರ್ ಹೇಳಿದರು.
ಅಲ್ಲದೆ ನನಗೆ ಖಾಲಿ ಕುಳಿತು ಅಭ್ಯಾಸವಿಲ್ಲ. ಚಿತ್ರರಂಗದಲ್ಲಿ ಸೋಲು-ಗೆಲುವು ಎಂಬುದು ಕಲೆಕ್ಷನ್ ಮೇಲೆ ನಿಂತಿಲ್ಲ. ಈವರೆಗೂ ನಾನು ಡುಡ್ಡಿನ ಬಗ್ಗೆ ಚಿಂತಿಸಿಲ್ಲ. ಆದರೆ, ನನ್ಮ ಮಗಳ ಮದುವೆ ವೇಳೆ ದುಡ್ಡು ಎಷ್ಟು ಮುಖ್ಯ ಎಂದು ನನಗೆ ಅರಿವಾಯಿತು. ಪ್ರತಿ ಲೆಕ್ಕಾಚಾರವೂ ದುಡ್ಡಿನಿಂದಲೇ ಎಂಬುದು ನನಗೆ ಗೊತ್ತಾಯಿತು. ಗುರಿ ಇಟ್ಟುಕೊಂಡು ದುಡ್ಡು ಮಾಡಬೇಕು ಎಂದು ಈಗ ಅನ್ನಿಸುತ್ತಿದೆ. ಇನ್ನು ಮುಂದೆ ನಾನು ದುಡ್ಡು ಸಂಪಾದಿಸುತ್ತೇನೆ ಎಂದು ರವಿಮಾಮ ಆತ್ಮಿವಿಶ್ವಾಸದಿಂದಲೇ ಹೇಳಿದರು.