'ಉಗ್ರಂ' ಸಿನಿಮಾ ಮೂಲಕ ಸ್ಯಾಂಡವುಡ್ನಲ್ಲಿ ಹೊಸ ಅಲೆ ಎಬ್ಬಿಸಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಮಡಿಲಿಗೆ ಕೆಜಿಎಫ್ ಯಶಸ್ಸು ಕೂಡಾ ಸೇರಿಕೊಂಡಿದೆ. ತಮ್ಮ ಸಂಗೀತ ನಿರ್ದೇಶನದ ಮೂಲಕ ಅವರ ಖ್ಯಾತಿ ವಿಶ್ವಮಟ್ಟದಲ್ಲಿ ಕೂಡಾ ಗಮನ ಸೆಳೆದಿದೆ.


ಸದ್ಯಕ್ಕೆ ರವಿ ಬಸ್ರೂರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸೇರಿ ಕೆಜಿಎಫ್ ಚಾಪ್ಟರ್-2 ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಸಾಹಸಕ್ಕೆ ರವಿ ಬಸ್ರೂರು ಮುಂದಾಗಿದ್ದಾರೆ. ‘ಗಿರ್ಮಿಟ್’ ಅನ್ನೋ ಪೈಸಾ ವಸೂಲ್ ಸಿನಿಮಾ ಮೂಲಕ ರವಿ ಬಸ್ರೂರು ಸರ್ಪ್ರೈಸ್ ಕೊಡಲು ಬರುತ್ತಿದ್ದಾರೆ. ರವಿ ಬಸ್ರೂರು ಕೇವಲ ಸಂಗೀತ ನಿರ್ದೇಶಕರಲ್ಲ, ಸದಭಿರುಚಿಯ ಸಿನಿಮಾ ನಿರ್ದೇಶಕ ಕೂಡಾ. 'ಕಟಕ' ಚಿತ್ರದಿಂದ ತಾವು ಎಂತ ತಂತ್ರಜ್ಞ ಎಂಬುದನ್ನು ಕೂಡಾ ಅವರು ತೋರಿಸಿಕೊಟ್ಟಿದ್ದರು.


ಇದೀಗ ಮಕ್ಕಳನ್ನು ಒಗ್ಗೂಡಿಸಿಕೊಂಡು ನಿಮಗೆಲ್ಲಾ ‘ಗಿರ್ಮಿಟ್’ ತಿನ್ನಿಸೋಕೆ ಬರ್ತಿದ್ದಾರೆ. ಒಂದಲ್ಲಾ ಎರಡಲ್ಲ ಐದು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ‘ಗಿರ್ಮಿಟ್’ ತೆರೆಗೆ ಬರಲಿದೆ. ಈಗಾಗಲೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇಂದು ಫಸ್ಟ್ಲುಕ್ ರಿವೀಲ್ ಆಗಿದೆ. ರಿಯಾಲಿಟಿ ಶೋ ಮೂಲಕ ಜನಪ್ರಿಯರಾದ ಹತ್ತಾರು ಮಕ್ಕಳಿಗೆ ಬಸ್ರೂರು ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಬಹುತೇಕ ಉಡುಪಿ, ಕುಂದಾಪುರ, ಗೋವಾ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿನಿಮಾ ಸೆನ್ಸಾರ್ ಮಂಡಳಿ ಮೆಟ್ಟಿಲೇರಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಿತ್ರವನ್ನು ಎನ್.ಎಸ್. ರಾಜ್ಕುಮಾರ್ ನಿರ್ಮಿಸಿದ್ದಾರೆ.
