ಕನ್ನಡ ಚಿತ್ರರಂಗದಲ್ಲಿ 'ರಾಮಾ ರಾಮಾ ರೇ' ಹಾಗೂ 'ಒಂದಲ್ಲಾ ಎರಡಲ್ಲಾ' ಚಿತ್ರಗಳನ್ನು ಮಾಡಿ ಭರವಸೆ ಹುಟ್ಟಿಸಿರುವ ನಿರ್ದೇಶಕ ಸತ್ಯ ಪ್ರಕಾಶ್ ಈಗ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಹೊಸ ಚಿತ್ರಕ್ಕೆ 'ಮ್ಯಾನ್ ಆಫ್ ದಿ ಮ್ಯಾಚ್' ಎಂಬ ಕ್ಯಾಚಿ ಟೈಟಲ್ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಬನಶಂಕರಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಈ ಸಿನಿಮಾ ಸೆಟ್ಟೇರಿದೆ.
'ಮ್ಯಾನ್ ಆಫ್ ದಿ ಮ್ಯಾಚ್' ಮುಹೂರ್ತ ಸಮಾರಂಭಕ್ಕೆ ನಾದಬ್ರಹ್ಮ ಹಂಸಲೇಖ, ಡಾಲಿ ಧನಂಜಯ್ ಆಗಮಿಸಿ ಶುಭ ಹಾರೈಸಿದ್ದಾರೆ. ಸಿನಿಮಾ ಟೈಟಲ್ ಕೇಳುತ್ತಿದ್ದಂತೆ ಇದು ಕ್ರಿಕೆಟ್‌ಗೆ ಸಂಬಂಧಿಸಿದ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಇದು ಯಾವುದೇ ಕ್ರೀಡೆಗೆ ಸಂಬಂಧಿಸಿದ ಸಿನಿಮಾ ಅಲ್ಲ. ಸಿನಿಮಾವೊಂದರ ಆಡಿಷನ್ ಪ್ರಕ್ರಿಯೆಯಲ್ಲಿ ನಡೆಯುವ ಪ್ರಸಂಗಗಳೇ ಈ ಸಿನಿಮಾದ ಕಥೆ ಎನ್ನುವುದು ನಿರ್ದೇಶಕ ಸತ್ಯ ಪ್ರಕಾಶ್ ಮಾತು. 'ರಾಮಾ ರಾಮಾ ರೇ' ಚಿತ್ರದ ನಟರಾದ ಧರ್ಮಣ್ಣ, ನಟರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಧರ್ಮಣ್ಣ ನಿರ್ಮಾಪಕನಾಗಿ ಕಾಣಿಸಿಕೊಂಡರೆ, ನಿರ್ದೇಶಕನಾಗಿ ನಟರಾಜ್ ಇರಲಿದ್ದಾರೆ. ಇನ್ನು ವೀಣಾ ಸುಂದರ್ ಮತ್ತು ಸುಂದರ್ ವೀಣಾ ಅವರು ಕೂಡಾ ಚಿತ್ರದಲ್ಲಿ ದಂಪತಿಗಳಾಗಿಯೇ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದ "ದಂಡಿ" ಸತ್ಯಾಗ್ರಹ ಬೆಳ್ಳಿತೆರೆಗೆ: ಉತ್ತರ ಕನ್ನಡದಲ್ಲಿ ಚಿತ್ರೀಕರಣ
'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದು ಸಿನಿಮಾದಲ್ಲಿ ಕೂಡಾ ಅವರು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಆಗೇ ಕಾಣಿಸಿಕೊಳ್ಳಲಿದ್ದಾರೆ. 50ಕ್ಕೂ ಹೆಚ್ಚು ಹೊಸ ಪ್ರತಿಭೆಗಳು 'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಲವಿತ್ ಮತ್ತು ಮದನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸುಂದರ್ ವೀಣಾ, ಆ್ಯಕ್ಟಿಂಗ್ ಜೊತೆಗೆ ಪದ್ಮನಾಭ್ ಭಟ್, ಸತ್ಯಪ್ರಕಾಶ್, ನಾಗೇಂದ್ರ ಹೆಚ್.ಎಸ್. ಜೊತೆ ಸೇರಿಕೊಂಡು ಸ್ಕ್ರಿಪ್ಟ್ ಕೂಡಾ ಬರೆದಿದ್ದಾರೆ. ಸತ್ಯಪ್ರಕಾಶ್ , ನಿರ್ದೇಶನದೊಂದಿಗೆ ಸತ್ಯ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಮತ್ತೋರ್ವ ನಿರ್ಮಾಪಕ ಮಂಜುನಾಥ್ ದಾಸೇಗೌಡ ಸಾಥ್ ನೀಡಿದ್ದಾರೆ.