ದೇಶದಲ್ಲಿ ಏನಾದರೂ ಘಟನೆಗಳಾದರೆ ಸಾಕು ಸಿನಿಮಾ ತಯಾರಕರು ಅದರ ಸ್ಫೂರ್ತಿಯಿಂದ ಸಿನಿಮಾ ಮಾಡಲು ಮುಂದಾಗುತ್ತಾರೆ. ಈ ರೀತಿಯ ಸಾಕಷ್ಟು ಸಿನಿಮಾಗಳು ಈಗಾಗಲೇ ತಯಾರಾಗಿವೆ. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಭಯ ಹುಟ್ಟಿಸಿದ್ದ ಆದಿತ್ಯ ರಾವ್ ಬಗ್ಗೆ ಕನ್ನಡದಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
'ಫಸ್ಟ್ ರ್‍ಯಾಂಕ್ ಟೆರರಿಸ್ಟ್ ಆದಿತ್ಯ' ಟೈಟಲ್ಗೆ ನಿರ್ಮಾಪಕ ತುಳಸಿ ರಾಮ್ ಫಿಲ್ಮ್ ಚೇಂಬರ್ನಲ್ಲಿ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಧೂತನ ಹೆಸರಿನಲ್ಲಿ ಸಿನಿಮಾ ಹೆಸರು ರಿಜಿಸ್ಟರ್ ಮಾಡಲು ನಿರ್ಮಾಪಕರು ಮುಂದಾಗಿದ್ದು ಒಂದು ವೇಳೆ ಈ ಸಿನಿಮಾ ತಯಾರಾದರೆ ಹೇಗಿರಲಿದೆ ಎಂಬ ಕುತೂಹಲ ಕಾಡುತ್ತಿದೆ. ಆದರೆ ಈ ಟೈಟಲ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಇನ್ನೂ ಒಪ್ಪಿಗೆ ದೊರೆತಿಲ್ಲ. ಒಂದು ವೇಳೆ ಟೈಟಲ್ಗೆ ಗ್ರಿನ್ ಸಿಗ್ನಲ್ ಸಿಕ್ಕರೆ ಈ ಚಿತ್ರಕ್ಕೆ ನಾಯಕ ಯಾರಾಗುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ನಿರ್ಮಾಪಕ ತುಳಸಿರಾಮ್ ಈಗಾಗಲೇ ' ಗಡ್ಡಪ್ಪ ಸರ್ಕಲ್' ಹಾಗೂ 'ಭೂತದ ಮನೆ' ಎಂಬ ಚಿತ್ರಗಳನ್ನು ನಿರ್ಮಿಸಿದ್ದು ಈಗ ಸೈಕೋ ಬಾಂಬರ್ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಗಡ್ಡಪ್ಪ ಸರ್ಕಲ್' ಸಿನಿಮಾ ನಿರ್ದೇಶಕ ಕೇಶವ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.