ನಿರ್ಮಾಪಕ ಶಿವಪ್ರಕಾಶ್ ತಮ್ಮ ಪ್ರಥಮ ಪ್ರಯತ್ನದಲ್ಲಿ ‘ಶ್ರೀ ಭರತ ಬಾಹುಬಲಿ’ ಚಿತ್ರಕ್ಕೆ ಆರು ಕೋಟಿ ರೂಪಾಯಿ ಸುರಿದಿದ್ದಾರೆ. ಅಲ್ಲದೆ ಜನವರಿ 17ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾಗೆ ಬರುವ ಪ್ರೇಕ್ಷಕರಿಗೆ 1 ಕೋಟಿ ರೂಪಾಯಿ ಬಹುಮಾನ ಕೂಡಾ ನೀಡಲಿದ್ದಾರೆ.
![Sri bharata bahubali](https://etvbharatimages.akamaized.net/etvbharat/prod-images/5588470_barata.jpg)
ಎಲ್ಲಾ ಪ್ರೇಕ್ಷಕರಿಗೂ ಹೇಗೆ ಬಹುಮಾನ ನೀಡಲು ಸಾಧ್ಯ ಎಂದು ಆಶ್ಚರ್ಯ ಪಡಬೇಡಿ, ಮುಂದೆ ಓದಿ. ಶಿವಪ್ರಕಾಶ್ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮಧ್ಯಮ ವರ್ಗದ ಬಹಳಷ್ಟು ಜನರಿಗೆ ನಿವೇಶನಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಜನವರಿ 17ರಂದು 'ಶ್ರೀ ಭರತ ಬಾಹುಬಲಿ ಚಿತ್ರವನ್ನು ನೋಡಿದ ಪ್ರೇಕ್ಷಕರು ತಮ್ಮ ಟಿಕೆಟ್ನ ಅರ್ಧ ಭಾಗವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಮತ್ತೊಂದು ಕೂಪನ್ ಕೂಡಾ ನೀಡಲಾಗುವುದು. ಎರಡು ವಾರಗಳ ನಂತರ ಥಿಯೇಟರ್ನಲ್ಲಿ ಗೇಟ್ ಕೀಪರ್ ಪಡೆದ ಇನ್ನುಳಿದ ಅರ್ಧ ಭಾಗವನ್ನು ಸಾರ್ವಜನಿಕರ ಮುಂದೆ ಲಕ್ಕಿ ಡಿಪ್ನಲ್ಲಿ ತೆಗೆಯಲಾಗುವುದು. ಅದೃಷ್ಟವಂತ ವಿಜೇತರಿಗೆ 10 ಕಾರುಗಳು ಹಾಗೂ 50 ಲಕ್ಷ ಬೆಲೆ ಬಾಳುವ ಚಿನ್ನವನ್ನು ನೀಡಲಾಗುವುದು. ಆದರೆ ಎಷ್ಟು ಜನರಿಗೆ ಈ ಬಹುಮಾನ ಎಂದು ಇನ್ನೂ ತಿರ್ಮಾನಿಸಿಲ್ಲ.
![Producer Shivaprakash](https://etvbharatimages.akamaized.net/etvbharat/prod-images/5588470_bahubali.jpg)
ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ನಿರ್ಮಾಪಕ ಶಿವಪ್ರಕಾಶ್ ಈ ಪ್ಲ್ಯಾನ್ ಮಾಡಿದ್ದಾರೆ. 'ಶ್ರೀ ಭರತ ಬಾಹುಬಲಿ' ಚಿತ್ರವನ್ನು ಮಂಜು ಮಾಂಡವ್ಯ ನಿರ್ದೇಶಿಸಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಅವರು ನಾಯಕರಾಗಿ ಕೂಡಾ ಎಂಟ್ರಿ ನೀಡಿದ್ದಾರೆ. ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾವನ್ನು ನಿರ್ದೇಶಿಸಿದ್ದವರು ಮಂಜು ಮಾಂಡವ್ಯ ಅವರೇ. ಚಿತ್ರದಲ್ಲಿ ಕಾಮಿಡಿ ನಟ ಚಿಕ್ಕಣ್ಣ ಕೂಡಾ ನಟಿಸಿದ್ದಾರೆ. ಕದ್ರಿ ಮಣಿಕಾಂತ್ ಈ ಚಿತ್ರದ 8 ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.