ಕೊಪ್ಪಳ: ತೃತೀಯ ಲಿಂಗಿಯೊಬ್ಬರು ನಾಯಕಿಯಾಗಿ ನಟಿಸಿರುವ ಸಿನಿಮಾವೊಂದು ಸ್ಯಾಂಡಲ್ವುಡ್ನಲ್ಲಿ ತಯಾರಾಗಿ ಬಿಡುಗಡೆಗೂ ಸಜ್ಜಾಗಿದೆ. ಹೈದರಾಬಾದ್-ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಹೊಸ ಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿರುವ 'ಮೂರನೇ ಕಣ್ಣು' ಎಂಬ ಚಿತ್ರದ ಮೊದಲ ಟೀಸರ್ ಕೂಡಾ ಬಿಡುಗಡೆಯಾಗಿದ್ದು ಮೇಕಿಂಗ್ ನೋಡಿದರೆ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ.
ಜಿಲ್ಲೆಯ ಭಾಗ್ಯನಗರ ಪಟ್ಟಣದ ನಿವಾಸಿ ಕೆ.ಎನ್. ನಜೀರ್ ಎಂಬುವವರು ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಓರ್ವ ತೃತೀಯಲಿಂಗಿ (ಮಂಗಳಮುಖಿ) ಎನ್ನುವುದು ವಿಶೇಷ. ಶ್ರೇಯ ಎಂಬ ಮಂಗಳಮುಖಿ ಮುಖ್ಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಎಂಬುವವರು ಈ ಚಿತ್ರದ ನಾಯಕ. ರೋಷ್ನಿ ಹಾಗೂ ಅಂಜಲಿ ಎಂಬ ಮತ್ತಿಬ್ಬರು ಮಂಗಳಮುಖಿಯರು ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಸುತ್ತಮುತ್ತ ಹಾಗೂ ಕೆಲವೊಂದಿಷ್ಟು ಸೀನ್‍ಗಳನ್ನು ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಂಗಳಮುಖಿಯರ ಬದುಕಿನ ಸುತ್ತ ಸುತ್ತುವ ಈ ಚಿತ್ರದ ಕಥೆ ಸಮಾಜಕ್ಕೆ ಒಂದು ಸಂದೇಶ ನೀಡಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕೆ.ಎನ್. ನಜೀರ್.
- " class="align-text-top noRightClick twitterSection" data="">
ಸುಮಾರು 90 ಲಕ್ಷ ರೂಪಾಯಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಅಬ್ದುಲ್ ಸಮದ್ ಹಾಗೂ ರಿಜ್ವಾನ್ ಬೇಪಾರಿ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈಗ ಬಿಡುಗಡೆಯಾಗಿರುವ ಮೊದಲ ಟೀಸರ್ ಮೇಕಿಂಗ್ ಗಮನ ಸೆಳೆಯುತ್ತಿದೆ. ರಾಧಾಕೃಷ್ಣ ಬಸ್ರೂರ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರು ಕಾಣಿಸಿಕೊಂಡಿದ್ದಾರೆ. 'ಮಂಗಳಮುಖಿಯರ ಬದುಕಿನ ಕಥಾ ಹಂದರವಿರುವ ಚಿತ್ರದಲ್ಲಿ ನಮ್ಮಂಥಹ ಮಂಗಳಮುಖಿಯರು ನಟಿಸಿರುವುದು ಬಹಳ ಖುಷಿ ನೀಡಿದೆ. ಕಷ್ಟಪಟ್ಟು ಚಿತ್ರ ಮಾಡಿದ್ದೇವೆ, ದಯವಿಟ್ಟು ಹರಸಿ ಎಂದು ನಟಿ ರೋಷ್ನಿ ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಇರುವ ಕೊರತೆಗಳ ನಡುವೆಯೂ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಹಲವು ಪ್ರಯತ್ನ ಮಾಡುವ ಈ ಭಾಗದ ಪ್ರತಿಭೆಗಳನ್ನು ಮೆಚ್ಚಲೇಬೇಕು. ಅಲ್ಲದೆ ಈ ಪ್ರತಿಭೆಗಳಿಗೆ ಪ್ರೋತ್ಸಾಹದ ಅಗತ್ಯ ಕೂಡಾ ಇದೆ.