ನಟ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರವು ತೆಲುಗಿನಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ಗೊತ್ತಿರುವ ವಿಷಯವೇ. ಕಳೆದ ವರ್ಷ ಕ್ರಿಸ್ಮಸ್ ಸಂದರ್ಭದಲ್ಲಿಯೇ ಚಿತ್ರವು ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ವಿಷಯ ಬಹಿರಂಗವಾಗಿತ್ತು. ಆ ನಂತರ ಈ ವರ್ಷದ ಮೊದಲ ದಿನ, ಅಂದರೆ ಜನವರಿ 1 ರಂದು ಯೂಟ್ಯೂಬ್‍ನ ಆನಂದ್ ಆಡಿಯೋದ ಚಾನೆಲ್‍ನಲ್ಲಿ ತೆಲುಗು ಟೀಸರ್ ಬಿಡುಗಡೆಯಾಗಿತ್ತು.
ಇದೀಗ ‘ಮದಗಜ’ ಚಿತ್ರವು ತಮಿಳಿನಲ್ಲಿಯೂ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ನಿರ್ದೇಶಕ ಮಹೇಶ್ ಗೌಡ, ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಚಿತ್ರದ ತಮಿಳು ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಟೀಸರ್ ಬಿಡುಗಡೆ ದಿನಾಂಕವನ್ನು ನಾಳೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಜೆ ಐದು ಗಂಟೆ ಐದು ನಿಮಿಷಕ್ಕೆ ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಲಾಗುತ್ತದೆ ಎಂದಿದ್ದಾರೆ. ಈ ಹಿಂದೆ ತೆಲುಗು ಟೀಸರ್ಗೆ ಶ್ರೀಮುರಳಿ ಅವರೇ ಧ್ವನಿ ನೀಡಿದ್ದರು. ಇದೀಗ ತಮಿಳು ಟೀಸರ್ಗೆ ಅವರ ಪಾತ್ರಕ್ಕೆ ಯಾರು ಧ್ವನಿಯಾಗುತ್ತಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ:ಡಬ್ಬಿಂಗ್ ಸಿನಿಮಾಗಳು ಹೆಚ್ಚಾದರೆ ಕನ್ನಡ ಚಿತ್ರರಂಗಕ್ಕೆ ನಷ್ಟ:ನಟ ಯೋಗಿ
‘ಮದಗಜ’ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ನಟಿ ಆಶಿಕಾ ರಂಗನಾಥ್ ನಟಿಸುತ್ತಿದ್ದು, ಜಗಪತಿ ಬಾಬು, ಶಿವರಾಜ್ ಕೆ.ಆರ್.ಪೇಟೆ, ಚಿಕ್ಕಣ್ಣ ಮುಂತಾದ ತಾರಾ ಬಳಗ ಚಿತ್ರದಲ್ಲಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡುತ್ತಿರುವ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಏಪ್ರಿಲ್ ಅಥವಾ ಮೇ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.