ತೀವ್ರ ನೆರೆಗೆ ತುತ್ತಾಗಿರುವ ಉತ್ತರ ಕರ್ನಾಟಕಕ್ಕೆ ನೀವು ಸ್ಪಂದಿಸುತ್ತಿಲ್ಲ ಎನ್ನುವ ವ್ಯಕ್ತಿಯೋರ್ವನ ಆರೋಪಕ್ಕೆ ನಟ ಕಿಚ್ಚ ಸುದೀಪ್ ಖಡಕ್ ಉತ್ತರ ಕೊಟ್ಟಿದ್ದಾರೆ.
ಶ್ರೀಧರ್ ಕುಂಬಾರ್ ಎನ್ನುವಾತ ಟ್ವೀಟ್ ಮಾಡಿ, ಪ್ರವಾಹಕ್ಕೆ ಸಿಲುಕಿ ಬದುಕು ಕಳೆದುಕೊಂಡಿರುವ ಉತ್ತರ ಕರ್ನಾಟಕದ ಜನಕ್ಕೆ ಆರ್ಥಿಕ ಸಹಾಯದ ಅಗತ್ಯವಿದೆ. ನೀವು ಸೇರಿದಂತೆ ಯಾರೂ ಕೂಡ ಈ ಜನರತ್ತ ಕಾಳಜಿ ವಹಿಸುತ್ತಿಲ್ಲ. ಆದ್ದರಿಂದ ನಾನು ಇನ್ಮುಂದೆ ಕನ್ನಡ ಸಿನಿಮಾ ವೀಕ್ಷಣೆ ಮಾಡದಿರಲು ನಿರ್ಧರಿಸಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ.
ಈ ವ್ಯಕ್ತಿಯ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸುದೀಪ್, ಈಗಾಗಲೇ ನಾನು ಸೇರಿದಂತೆ ಕನ್ನಡ ಚಿತ್ರರಂಗದವರು ಉತ್ತರ ಕರ್ನಾಟಕದ ನೆರೆ ಸತ್ರಸ್ತರಿಗೆ ಅಗತ್ಯ ಸಹಾಯ ಮಾಡುತ್ತಿದ್ದೇವೆ. ನಮ್ಮ ಹುಡುಗರು ಅಲ್ಲಿಯೇ ಬೀಡು ಬಿಟ್ಟು ಸಂತ್ರಸ್ತರ ನೆರವಿಗೆ ನಿಂತಿರುವುದು ಬಹುಶಃ ನಿಮ್ಮ ಗಮನಕ್ಕೆ ಬಂದಿಲ್ಲ ಎಂದುಕೊಳ್ಳುತ್ತೇನೆ. ಒಂದು ವೇಳೆ ನೀವು ಹೀಗೆ ಕುರುಡು ಕಣ್ಣಿನಿಂದ ನೋಡಿದ್ರೆ, ನೀವು ಆಡಿದ ಮಾತುಗಳು ದೊಡ್ಡ ಹಾನಿಯನ್ನುಂಟು ಮಾಡುತ್ತೆ ಎಂದು ಉತ್ತರಿಸಿದ್ದಾರೆ.
ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಚಿತ್ರರಂಗ :
ಮಹಾಮಳೆ ಸೃಷ್ಟಿಸಿರುವ ಪ್ರವಾಹಕ್ಕೆ ಉತ್ತರ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ. ನಿರಂತರ ಮಳೆಯಿಂದ ಮನೆ-ಮಠ ಕಳೆದುಕೊಂಡು ಜನರು ಬೀದಿಗೆ ಬಿದ್ದಿದ್ದಾರೆ. ಇವರ ಸಹಾಯಕ್ಕೆ ಅನೇಕ ಸಂಘ-ಸಂಸ್ಥೆಗಳು ಮುಂದಾಗಿವೆ. ಕನ್ನಡ ಚಿತ್ರರಂಗ ಕೂಡ ನೆರೆ ಪರಿಹಾರಕ್ಕೆ ಕೈ ಜೋಡಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಶಿವರಾಜ್‌ಕುಮಾರ್,ಪುನೀತ್ ರಾಜಕುಮಾರ್, ನಟ ಶರಣ್, ನೆನಪಿರಲಿ ಪ್ರೇಮ್, ನೀನಾಸಂ ಸತೀಶ್, ಹಿರಿಯ ನಟಿ ತಾರಾ ಅನುರಾಧಾ, ಹರಿಪ್ರಿಯಾ ಹೀಗೆ ಸಾಕಷ್ಟು ತಾರೆಯರು ತಾವು ಮತ್ತು ಅಭಿಮಾನಿಗಳಿಂದ ನೆರವಿನ ಹಸ್ತ ಚಾಚಿದ್ದಾರೆ.