ಕನ್ನಡ ಚಿತ್ರರಂಗದಲ್ಲಿ ಟೈಟಲ್ನಿಂದಲೇ ಗಮನ ಸೆಳೆಯುತ್ತಿರೋ ಚಿತ್ರ 'ಕರ್ಮಣ್ಯೇವಾಧಿಕಾರಸ್ತೇ'. ಇದರರ್ಥ 'ನೀನು ನಿನ್ನ ಕೆಲಸ ಮಾಡು ಫಲಾಫಲಗಳನ್ನು ನನಗೆ ಬಿಡು' ಅಂತಾ. ಯುವ ನಟ ಪ್ರತೀಕ್ ಸುಬ್ರಮಣಿ ಅಭಿನಯದ, ಕರ್ಮಣ್ಯೇವಾಧಿಕಾರಸ್ತೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನಗರದ ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ನೆರವೇರಿತು. ಧಾರವಾಡ ಶಾಸಕ ಅರವಿಂದ್ ಬೆಲ್ಲದ್ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
![Karmanyevaadhikaaraste cenema songs launches by mla aravinda bellad](https://etvbharatimages.akamaized.net/etvbharat/prod-images/kn-bng-01-karmanyevaadhikaaraste-cinemage-shasaka-aravindu-belladu-support-7204735_16092021103926_1609f_1631768966_782.jpg)
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಈ ಚಿತ್ರದ ನಾಯಕ ಪ್ರತೀಕ್ ಚಿಕ್ಕಂದಿನಿಂದಲೂ ಪರಿಚಯ. ಅವನು ಸಿನಿಮಾಗೆ ಬರುತ್ತಾನೆ ಎಂದು ತಿಳಿದಾಗ ಇವನಿಗೆ ಏಕೆ ಬೇಕು ಅಂದುಕೊಂಡಿದ್ದೆ. ಈಗ ಟ್ರೇಲರ್ ನೋಡಿ ಸಂತಸವಾಯಿತು. ಎಲ್ಲರ ಶ್ರಮ ಈ ಟ್ರೇಲರ್ನಲ್ಲೇ ಕಾಣುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ನಾನು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ
ಇನ್ನು ಈ ಚಿತ್ರದ ನಾಯಕ, ಪ್ರತೀಕ್ ಸುಬ್ರಮಣಿ ಮಾತನಾಡಿ, ನಾನು ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಹಾಗೂ ನಿರ್ದೇಶಕ ಶ್ರೀಹರಿ ಆನಂದ್ ಕಿರುಚಿತ್ರವೊಂದರ ಮೂಲಕ ಪರಿಚಿತರಾದೆವು. ಅಂದಿನಿಂದ ಈ ಚಿತ್ರ ಹಿಡಿದುಕೊಂಡು ಸಾಕಷ್ಟು ಅಲೆದಿದ್ದೇವೆ. ಕೊನೆಗೆ ದೇವರ ಹಾಗೆ ನಿರ್ಮಾಪಕ ರಮೇಶ್ ರಾಮಯ್ಯ ಸಿಕ್ಕರು. ನಂತರ ಚಿತ್ರ ಆರಂಭವಾಯಿತು. ಮಧ್ಯೆ ಕೊರೊನಾದಿಂದ ಸಾಕಷ್ಟು ಅಡೆತಡೆಗಳು ಎದುರಾದವು. ಕೊನೆಗೆ ಚಿತ್ರ ನಿರ್ಮಾಣ ಹಂತಕ್ಕೆ ಬಂದಿದೆ. ಟ್ರೇಲರ್ಗಿಂತ ಹತ್ತು ಪಟ್ಟು ಸಿನಿಮಾ ಚೆನ್ನಾಗಿದೆ ಎಂಬ ಭರವಸೆ ಇದೆ ಅಂದರು.
![Karmanyevaadhikaaraste cenema songs launches by mla aravinda bellad](https://etvbharatimages.akamaized.net/etvbharat/prod-images/kn-bng-01-karmanyevaadhikaaraste-cinemage-shasaka-aravindu-belladu-support-7204735_16092021103926_1609f_1631768966_828.jpg)
ನಾನು ಹಾಗೂ ಪ್ರತೀಕ್ ಸುಬ್ರಮಣಿ ಸಿನಿರಂಗದಲ್ಲಿ ಒಟ್ಟಿಗೆ ಸೈಕಲ್ ತುಳಿದವರು. ಕಥೆ ಸಿದ್ಧ ಮಾಡಿಕೊಂಡಾಗ ಚಿತ್ರದ ಶೀರ್ಷಿಕೆ ಏನಿಡಬೇಕು ಎಂಬ ಚರ್ಚೆ. ಕೊನೆಗೆ ಪ್ರತೀಕ್ ಈ ಹೆಸರು ಸೂಚಿಸಿದರು. ಚಿತ್ರ ನಿರ್ಮಾಣಕ್ಕೆ ಯಾರು ಸಿಗದಿದ್ದಾಗ, ಆಪತ್ಭಾಂಧವನಂತೆ ಬಂದವರು ರಮೇಶ್ ರಾಮಯ್ಯ ಅವರಿಗೆ ನಮ್ಮ ಧನ್ಯವಾದ ಎಂದರು. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲೇ ಹೆಚ್ಚು ಭಾಗ, ಮಿಕ್ಕ ಭಾಗ ದಾಂಡೇಲಿಯಲ್ಲಿ ನಡೆದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ. ನನ್ನೊಡನೆ ಸಹಕರಿಸಿದ ಚಿತ್ರತಂಡಕ್ಕೆ ಸಾವಿರ ಧನ್ಯವಾದ ಎಂದರು ನಿರ್ದೇಶಕ ಶ್ರೀಹರಿ ಆನಂದ್.
![Karmanyevaadhikaaraste cenema songs launches by mla aravinda bellad](https://etvbharatimages.akamaized.net/etvbharat/prod-images/kn-bng-01-karmanyevaadhikaaraste-cinemage-shasaka-aravindu-belladu-support-7204735_16092021103926_1609f_1631768966_906.jpg)
ಹೊರದೇಶದಲ್ಲಿದ್ದರೂ ಮನಸ್ಸೆಲ್ಲಾ ಇಲ್ಲೇ ಇತ್ತು
ನಾನು ಅನುಭವಿ ನಿರ್ಮಾಪಕನಲ್ಲ. ನಾನೊಬ್ಬ ವೈದ್ಯ. 23 ವರ್ಷಗಳಿಂದ ಹೊರದೇಶದಲ್ಲಿದ್ದರೂ, ಮನಸ್ಸೆಲ್ಲಾ ಇಲ್ಲೇ ಇತ್ತು. ಅಲ್ಲೇ ಸಾಕಷ್ಟು ಸಿನಿಮಾ ನೋಡುತ್ತಿದ್ದೆ. ನನ್ನ ಪರಿಚಿತರೊಬ್ಬರ ಮೂಲಕ ಪ್ರತೀಕ್ ಇಮೇಲ್ ಮೂಲಕ ಸಂಪರ್ಕಿಸಿದರು. ಕೊನೆಗೆ ಇಲ್ಲಿಗೆ ಬಂದಾಗ ಮಾತುಕಥೆಯಾಗಿ, ನಿರ್ಮಾಣಕ್ಕೆ ಮುಂದಾದೆ. ಚಿತ್ರ ಚೆನ್ನಾಗಿದೆ, ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕ ರಮೇಶ್ ರಾಮಯ್ಯ. ನಿರ್ಮಾಪಕರೇ ಟ್ರೇಲರ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
![Karmanyevaadhikaaraste cenema songs launches by mla aravinda bellad](https://etvbharatimages.akamaized.net/etvbharat/prod-images/kn-bng-01-karmanyevaadhikaaraste-cinemage-shasaka-aravindu-belladu-support-7204735_16092021103926_1609f_1631768966_817.jpg)
ಸಂಜಿತ್ ಹೆಗ್ಡೆ ಹಾಗೂ ಅಶ್ವಿನಿ ಜೋಷಿ ಹಾಡುಗಾರಿಕೆ
ಚಿತ್ರದಲ್ಲಿ ಎರಡು ಹಾಡುಗಳಿದೆ. ಒಂದನ್ನು ಸಂಜಿತ್ ಹೆಗ್ಡೆ ಹಾಗೂ ಅಶ್ವಿನಿ ಜೋಷಿ ಹಾಡಿದ್ದಾರೆ. ಮತ್ತೊಂದನ್ನು ನಾನು ಹಾಗೂ ಈಶಾ ಸುಚಿ ಹಾಡಿದ್ದೇವೆ. ನಿಶ್ಚಲ್ ಹಾಡುಗಳನ್ನು ಬರೆದಿದ್ದಾರೆ ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಮಾಹಿತಿ ನೀಡಿದರು. ಛಾಯಾಗ್ರಹಣ ಕುರಿತು ಉದಯ್ ಲೀಲಾ, ಸಂಕಲನ ಕಾರ್ಯದ ಬಗ್ಗೆ ವಿಜೇತ್ ಚಂದ್ರ ಮಾತನಾಡಿದರು. ಈ ಚಿತ್ರದಲ್ಲಿ ನಟಿಸಿರುವ ಅಭಿಷೇಕ್ ಶೆಟ್ಟಿ, ನಾಟ್ಯ ರಂಗ ಮುಂತಾದವರು ಪಾತ್ರದ ಬಗ್ಗೆ ಹೇಳಿದರು, ಚಿತ್ರರಂಗದ ಸಾಕಷ್ಟು ಗಣ್ಣರು ಈ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
'ಕರ್ಮಣ್ಯೇವಾಧಿಕಾರಸ್ತೇ' ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ದಿವ್ಯ ಈ ಚಿತ್ರದ ನಾಯಕಿ. ನೇಪಾಳದ ಡೋಲ್ಮ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಟ್ಯ ರಂಗ, ಉಗ್ರಂ ಮಂಜು, ನಟನ ಪ್ರಶಾಂತ್ ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.