ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಚಿತ್ರಗಳಿಗೆ ಬರ ಇಲ್ಲ. ಹೊಸಬರು ಹಲವು ಪ್ರಯೋಗಾತ್ಮಕ ಸಿನಿಮಾಗಳನ್ನು ತೆರೆ ಮೇಲೆ ತರುತ್ತಿದ್ದಾರೆ. ಈ ಸಾಲಿಗೆ ನಟಿ ಪಾವನಾ ಗೌಡ ನಟಿಸಿರುವ 'ಇನ್' ಸಿನಿಮಾ ಮತ್ತೊಂದು ಸೇರ್ಪಡೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು 'ಇನ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬುಧವಾರ ಬಿಡುಗಡೆ ಮಾಡಿದರು. ಇದೇ ವೇಳೆ ಸಿನಿಮಾ ಯಶಸ್ಸು ಕಾಣಲಿ ಎಂದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ರುದ್ರಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ಯುವ ನಿರ್ದೇಶಕ ಬಡಿಗೇರ್ ದೇವೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಒಬ್ಬಳೇ ಯುವತಿ, ಒಂಟಿ ಮನೆ ಸುತ್ತ, ಲಾಕ್ಡೌನ್ ಪರಿಣಾಮದ ಕುರಿತ ವಿಭಿನ್ನ ಕಥಾ ಹಂದರವುಳ್ಳ ಚಿತ್ರ ಇದಾಗಿದೆ. ಪತ್ರಕರ್ತ ಶಂಕರ ಪಾಗೋಜಿ ಕಥೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಬಡಿಗೇರ್ ದೇವೇಂದ್ರ, ಲಾಕ್ಡೌನ್ ಸಂದರ್ಭದಲ್ಲಿ ಏನಾದರೂ ಪ್ರಯೋಗ ಮಾಡಬೇಕೆಂದು ಸ್ನೇಹಿತ ಶಂಕರ್ ಪಾಗೋಜಿ ಜೊತೆ ಈ ಚಿತ್ರದ ಕುರಿತು ಚರ್ಚಿಸಿದೆ. ಕಥೆಯ ಎಳೆ ಚೆನ್ನಾಗಿದೆ ಎಂದು ಪಾಗೋಜಿ ಅಭಿಪ್ರಾಯ ನೀಡಿದ ಬಳಿಕ ಸಿನಿಮಾ ಮಾಡಲು ನಿರ್ಧರಿಸಿದೆ. ನಟಿ ಪಾವನಗೌಡ ಅವರೂ ಈ ಸಿನಿಮಾದಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದೆ. ಜನರು ನಮ್ಮ ಪ್ರಯತ್ನವನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಒಂದು ವಿಭಿನ್ನ ಹಾಗೂ ಪ್ರಯೋಗಾತ್ಮಕ ಪಾತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಮಹಾನಗರದಲ್ಲಿ ಏಕಾಂಗಿಯಾಗಿ ಜೀವನ ನಡೆಸುವ ಯುವತಿಯರಿಗೆ ಈ ಚಿತ್ರ ಒಳ್ಳೆಯ ಸಂದೇಶ ಮತ್ತು ಸ್ಪೂರ್ತಿದಾಯಕವಾಗಲಿದೆ ಎನ್ನುವ ವಿಶ್ವಾಸವನ್ನು ಚಿತ್ರದ ನಾಯಕಿ ಪಾವನಾಗೌಡ ವ್ಯಕ್ತಪಡಿಸಿದ್ದಾರೆ.
ಟಿ.ಎನ್. ಕರುಣಾಕರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶಂಕರ್ ಪಾಗೋಜಿ ಹಾಗೂ ಬಡಿಗೇರ್ ದೇವೇಂದ್ರ ಸಿನಿಮಾದ ಚಿತ್ರಕತೆ ಮತ್ತು ಸಂಭಾಷಣೆಯನ್ನು ಜಂಟಿಯಾಗಿ ಬರೆದಿದ್ದಾರೆ. ಚಿತ್ರಕ್ಕೆ ಭರತ್ ನಾಯ್ಕ್ ಅವರ ಇಂಪಾದ ಸಂಗೀತವಿದೆ.