ಚಿತ್ರದುರ್ಗದ ಪಾಳೆಗಾರ ಭರಮಣ್ಣ ನಾಯಕನ ಜೀವನ ಆಧಾರಿತ 'ಬಿಚ್ಚುಗತ್ತಿ' ಸಿನಿಮಾ ಸಕ್ಸಸ್ನಲ್ಲಿರುವ ನಟ ರಾಜವರ್ಧನ್ ಇದೀಗ ತಮ್ಮ ಮುಂದಿನ ಸಿನಿಮಾ ತಯಾರಿಯಲ್ಲಿದ್ದಾರೆ. ಇನ್ನು ನಾಳೆ ರಾಜವರ್ಧನ್ ಹುಟ್ಟುಹಬ್ಬ. 31ನೇ ವಸಂತಕ್ಕೆ ಕಾಲಿಡುತ್ತಿರುವ ರಾಜವರ್ಧನ್ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಇಡೀ ಪ್ರಪಂಚವೇ ಕೊರೊನಾ ವೈರಸ್ ದಾಳಿಯಿಂದ ತತ್ತರಿಸಿಹೋಗಿದೆ. ಈಗಾಗಲೇ 8 ಮಂದಿ ಕೊರೊನಾಗೆ ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 33 ಕ್ಕೆ ಏರಿದೆ. 22 ರಂದು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಆದರೆ, ಕೆಲವರು ಕೊರೊನಾಗೆ ಕೇರ್ ಮಾಡದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಈ ಸಮಯದಲ್ಲಿ ನನ್ನ ಹುಟ್ಟುಹಬ್ಬ ಆಚರಣೆ ಬೇಡ ಎಂದು ರಾಜವರ್ಧನ್ ಮನವಿ ಮಾಡಿದ್ದಾರೆ. ಈ ಸಂಬಂಧ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಾಜವರ್ಧನ್ ಪೋಸ್ಟ್ ಹಾಕಿದ್ದಾರೆ.
'ನನ್ನ ಪ್ರೀತಿಸುವ ಆತ್ಮೀಯ ಸ್ನೇಹಿತರೇ, ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ಎಂಬ ವೈರಸ್ನಿಂದಾಗಿ ಪ್ರತಿಯೊಬ್ಬರ ಸುರಕ್ಷತೆ ಮತ್ತೆ ಆರೋಗ್ಯದ ಬಗ್ಗೆಯೂ ನನಗೆ ಕಾಳಜಿ ಇದೆ. ಹೀಗಾಗಿ ನನ್ನ ಜನ್ಮದಿನದಂದು ಯಾವುದೇ ಆಚರಣೆ ಮಾಡದಿರಲು ನಿರ್ಧರಿಸಿದ್ದೇನೆ. ಆದುದರಿಂದ ನನ್ನ ಪ್ರೀತಿಸುವ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಅಭಿಮಾನ ಸದಾ ನನ್ನ ಮೇಲಿರಲಿ' ಎಂದು ರಾಜವರ್ಧನ್ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.