ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಖ್ಯಾತರಾಗಿದ್ದಾರೆ. 1969ರಲ್ಲಿ ದ್ವಾರಕೀಶ್ ಚಿತ್ರಾಲಯ ಎಂಬ ಪ್ರೊಡಕ್ಷನ್ ಹೌಸ್ ಹುಟ್ಟು ಹಾಕಿದ ಕರ್ನಾಟಕದ ಕುಳ್ಳ ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡು ಬರೋಬ್ಬರಿ 50 ವರ್ಷಗಳನ್ನು ಪೂರೈಸಿದ್ದಾರೆ. 1969ರಲ್ಲಿ ಡಾ.ರಾಜಕುಮಾರ್ ಅವರ ಜೊತೆ ಮೇಯರ್ ಮುತ್ತಣ್ಣ ಚಿತ್ರ ಮಾಡಿದ್ದರು. ಅಲ್ಲದೆ ಈಗ ದ್ವಾರಕೀಶ್ ಚಿತ್ರಾಲಯ 50 ವರ್ಷ ತುಂಬಿದ ಸಂಭ್ರಮದಲ್ಲಿದೆ.
ನಾನು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಲು ಅಣ್ಣಾವ್ರೇ ಕಾರಣ. ಅಲ್ಲದೆ ಅವರ ತಮ್ಮ ವರದಪ್ಪನವರು ನನ್ನನ್ನು ಕರೆದು ರಾಜಕುಮಾರ್ ಅವರ ಡೇಟ್ ಕೊಡದಿದ್ದರೆ, ನಾನು ನಿರ್ಮಾಪಕನಾಗಲು ಸಾಧ್ಯವೇ ಇರಲಿಲ್ಲ. ಡಾ.ರಾಜಕುಮಾರ್ ಅವರ ಜೊತೆ ನಟಿಸುತ್ತಿದ್ದ ನನ್ನನ್ನು ಕರೆದು, ವರದಪ್ಪನವರು ನಿರ್ಮಾಪಕನಾಗಿ ಮಾಡಿದರು. ಅಲ್ಲದೆ ಇಂಡಸ್ಟ್ರಿಯಲ್ಲಿ 50 ವರ್ಷಗಳನ್ನು ಪೂರೈಸಲು ನನ್ನ ಸ್ನೇಹಿತ ಡಾ.ವಿಷ್ಣುವರ್ಧನ್ ಕಾರಣ. ನಾನು 50 ವರ್ಷಗಳಲ್ಲಿ ರಾಜಕುಮಾರ್, ರಜನಿಕಾಂತ್, ಶಂಕರ್ನಾಗ, ವಿಷ್ಣುವರ್ಧನ್, ಅಂಬರೀಶ್ ಇವರೆಲ್ಲರ ಜೊತೆ ಸಿನಿಮಾ ಮಾಡಿದ್ದು, ಎಲ್ಲರ ಸಹಕಾರದಿಂದ ಇಷ್ಟು ವರ್ಷ ನಿರ್ಮಾಪಕನಾಗಿ ಇಂಡಸ್ಟ್ರಿಯಲ್ಲಿ ಉಳಿಸಿಕೊಂಡಿದ್ದೇನೆ ಎಂದು ಆಯುಷ್ಮಾನ್ ಭವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ದ್ವಾರಕೀಶ್ ತಿಳಿಸಿದರು.
ಭಾರತೀಯ ಚಿತ್ರರಂಗದಲ್ಲಿ 50 ವರ್ಷಗಳಿಂದ ಸಿನಿಮಾ ಮಾಡಿಕೊಂಡು ಬರುತ್ತಿರುವ ಕೆಲವೇ ನಿರ್ಮಾಣ ಸಂಸ್ಥೆಗಳಲ್ಲಿ ದ್ವಾರಕೀಶ್ ಚಿತ್ರಾಲಯ ಕೂಡ ಒಂದು. ಹಿಂದಿಯಲ್ಲಿ ರಾಜಕುಮಾರ್ ಪ್ರೊಡಕ್ಷನ್, ತೆಲುಗಿನಲ್ಲಿ ರಾಮಾನಾಯ್ಡು ಪ್ರೊಡಕ್ಷನ್ ಹೊರತುಪಡಿಸಿದರೆ ದ್ವಾರಕೀಶ್ ಚಿತ್ರಾಲಯ ಈವರೆಗೂ ಚಿತ್ರಗಳನ್ನು ಮಾಡಿಕೊಂಡು ಅಸ್ತಿತ್ವ ಉಳಿಸಿಕೊಂಡಿದೆ. ಇದು ನನಗೆ ತುಂಬಾ ಹೆಮ್ಮೆಯ ವಿಷಯ ಎಂದು ನಟ ದ್ವಾರಕೀಶ್ ತಮ್ಮ ಸಂತಸ ಹಂಚಿಕೊಂಡರು.