ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್ವುಡ್ ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ಸಿನಿಮಾ ಇದೇ ಶುಕ್ರವಾರ ಅಂದರೆ 27ರಂದು ದೇಶಾದ್ಯಂತ ತೆರೆ ಕಾಣುತ್ತಿದೆ. ಸಿನಿಮಾ ಹಿಂದಿ, ತಮಿಳು, ಕನ್ನಡ, ತಮಿಳು ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ಬಿಡುಡೆಯಾಗುತ್ತಿದೆ.
ಇಂದು ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿದ ನಿರ್ದೇಶಕ ಪ್ರಭುದೇವ, ನಟಿ ಸಾಯಿ ಮಂಜ್ರೇಕರ್ ಹಾಗೂ ಸಲ್ಮಾನ್ ಖಾನ್ ಅವರನ್ನು ಸುದೀಪ್ ಸ್ವಾಗತಿಸಿದರು. ಪ್ರಚಾರದ ವೇಳೆ ಮಾತನಾಡಿದ ಸಲ್ಮಾನ್ ಖಾನ್ ಹಾಗೂ ಸುದೀಪ್, ದಬಾಂಗ್-3 ಚಿತ್ರವನ್ನು ಏಕೆ ನೋಡಬೇಕು ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭಿಮಾನಿಗಳಿಗಾಗಿ 'ಟೈಮ್ ನಂದು, ತಾರೀಖು ನಂದು' ಎಂದು ಕನ್ನಡದಲ್ಲಿ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ, ನಮ್ಮ ಸಿನಿಮಾವನ್ನು ನೋಡಿ ಬೆನ್ನು ತಟ್ಟಿ ಎಂದು ಹೇಳಿದರು. ಕಿಚ್ಚ ಸುದೀಪ್ ಕೂಡಾ ಮಾತನಾಡಿ, ಮೊದಲ ಬಾರಿಗೆ ಸಲ್ಮಾನ್ ಜೊತೆ ತೆರೆ ಹಂಚಿಕೊಂಡಿದ್ದು, ಇದು ನಿಜಕ್ಕೂ ಖುಷಿ ಆಯ್ತು ಎಂದು ಹೇಳಿದರು. ಸಲ್ಮಾನ್ ಖಾನ್ ಎದುರು ಟಾಪ್ಲೆಸ್ ಆಗಿ ನಟಿಸಲು ಭಯ ಆಯ್ತು ಎಂದು ಕೂಡಾ ಕಿಚ್ಚ ಹೇಳಿದರು.
ನಿರ್ದೇಶಕ ಪ್ರಭುದೇವ ಕೂಡಾ ಕನ್ನಡದಲ್ಲಿ ಮಾತನಾಡಿ, 'ದಬಾಂಗ್-3' ಸಿನಿಮಾದ ಅನುಭವದ ಬಗ್ಗೆ ಹೇಳಿಕೊಂಡರು. ಈ ಸಿನಿಮಾ ಕನ್ನಡದಲ್ಲಿ ಕೂಡಾ ಡಬ್ ಆಗಿದ್ದು, ಸಲ್ಮಾನ್ ಖಾನ್ ಚುಲ್ಬುಲ್ ಪಾಂಡೆ ಆಗಿ ಕನ್ನಡದಲ್ಲಿ ಹೇಗೆ ಡೈಲಾಗ್ ಹೊಡೆದಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಸಲ್ಮಾನ್ ಖಾನ್ ಎದುರಿಗೆ ಅಭಿನಯ ಚಕ್ರವರ್ತಿ ಹೇಗೆ ಅಬ್ಬರಿಸಿದ್ದಾರೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.