ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದಬಾಂಗ್ - 3. ಮೊದಲ ಬಾರಿ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ತೆರೆ ಹಂಚಿಕೊಂಡಿದ್ದು ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.
ಇನ್ನು ಚಿತ್ರದ ಕನ್ನಡ ಅವತರಣಿಕೆಯ ಪ್ರಚಾರಕ್ಕಾಗಿ ನಿರ್ದೇಶಕ ಪ್ರಭುದೇವ, ನಟ ಸಲ್ಮಾನ್ ಖಾನ್ ಹಾಗೂ ನಟಿ ಸಾಯಿ ಮಂಜ್ರೇಕರ್ ಬೆಂಗಳೂರಿಗೆ ಆಗಮಿಸಿದ್ದಾರೆ. ಮುಂಬೈನಿಂದ ವಿಶೇಷ ವಿಮಾನದಲ್ಲಿ ಹೆಚ್ಎಎಲ್ ಏರ್ಪೋರ್ಟಿಗೆ ಬಂದಿಳಿದ ಮೂವರನ್ನೂ ಕಿಚ್ಚ ಸುದೀಪ್ ಸ್ವಾಗತಿಸಿದರು. ಮೊದಲು ಚಿತ್ರದ ನಿರ್ದೇಶಕ ಪ್ರಭುದೇವ, 'ಎಲ್ಲರಿಗೂ ನಮಸ್ಕಾರ, ನಮ್ಮವರ ಜೊತೆ ನಮ್ಮೂರಿಗೆ ಬಂದಿದ್ದೇವೆ' ಎಂದು ಹೇಳುತ್ತಾ ಫ್ಲೈಟ್ ಇಳಿದರು. ನಂತರ ನಟಿ ಸಾಯಿ ಹಾಗೂ ಸಲ್ಮಾನ್ ಖಾನ್ ವಿಮಾನ ಇಳಿದು ಕನ್ನಡದಲ್ಲೇ 'ನಮಸ್ಕಾರ ಬೆಂಗಳೂರು'ಎಂದು ಹೇಳಿದ್ದು ವಿಶೇಷವಾಗಿತ್ತು.
ದಬಾಂಗ್ 3 ಚಿತ್ರದಲ್ಲಿ ಕಿಚ್ಚ ಸುದೀಪ್, ಸಲ್ಮಾನ್ ಖಾನ್ ಎದುರು ಖಳನಟ ಬಲ್ಲಿಯಾಗಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಜೊತೆ ಸಾಯಿ ಮಂಜ್ರೇಕರ್ ಹಾಗೂ ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ. ಅರ್ಬಾಜ್ ಖಾನ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.