ಟಾಲಿವುಡ್ ಹಾಗೂ ದೇಶಾದ್ಯಂತ ಸದ್ದು ಮಾಡುತ್ತಿರುವ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ನಿರ್ಮಾಪಕರ ವಿರುದ್ಧ ದೂರು ನೀಡಲಾಗಿದೆ.
ಹೌದು, ಇದೇ ಅಕ್ಟೋಬರ್ 2ರಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಸೈರಾ ಸಿನಿಮಾದ ನಿರ್ಮಾಪಕರ ವಿರುದ್ಧ ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಯ್ಯಾಲವಾಡ ವಂಶಸ್ಥ ದಸ್ತಗಿರಿ ರೆಡ್ಡಿ ಅವರು ಈ ದೂರು ನೀಡಿದ್ದು, ಸೈರಾ ಸಿನಿಮಾಕ್ಕಾಗಿ ತಮ್ಮ ಕುಟುಂಬದಿಂದ ಹಲವು ಮಾಹಿತಿಗಳನ್ನು ಪಡೆಯಲಾಗಿತ್ತು. ಆದ್ರೆ ಒಪ್ಪಂದದಂತೆ ನಮಗೆ ಹಣ ನೀಡಿಲ್ಲ. ಸಿನಿಮಾ ಕಥೆ ರಚನೆ ಮಾಡುವಾಗ ಸೈರಾ ನರಸಿಂಹ ರೆಡ್ಡಿಯ ಬಗ್ಗೆ ನಮ್ಮಿಂದ ಮಾಹಿತಿ ಪಡೆದು, ಹಣ ಕೊಡುವ ಬಗ್ಗೆ ಒಪ್ಪಂದವಾಗಿತ್ತು. ಆದ್ರೆ ಇದೀಗ ನಿರ್ಮಾಪಕರು ಹಣ ನೀಡಿಲ್ಲವೆಂದು ದಸ್ತಗಿರಿ ರೆಡ್ಡಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಈವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಆದ್ರೆ ದೂರನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸೈರಾ ಸಿನಿಮಾ ತಂಡ ಮೊನ್ನೆ ತಾನೆ ಟ್ರೈಲರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ. ಇನ್ನು ಸಿನಿಮಾ ಅಕ್ಟೋಬರ್ 2ಕ್ಕೆ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿದ್ದು, ಈ ದೂರು ಸಿನಿಮಾ ಬಿಡುಗಡೆಗೆ ಕಂಟಕವಾಗುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮನೆಮಾಡಿದೆ. ಈ ಚಿತ್ರವನ್ನು ಮೆಗಾಸ್ಟಾರ್ ಪುತ್ರ, ನಟ ರಾಮಚರಣ್ ತೇಜ್ ನಿರ್ಮಾಣ ಮಾಡಿದ್ದಾರೆ.