ಬೆಂಗಳೂರು: ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದೆ. ಪ್ರತಿದಿನ ಒಬ್ಬೊಬ್ಬರ ಹೆಸರು ಕೇಳಿ ಬರುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಕೆಲವು ನಟ-ನಟಿಯರಿಗೆ, ಅವರ ಆಪ್ತರಿಗೆ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಅಲ್ಲದೆ ಇತ್ತೀಚೆಗೆ ಕೆಲವು ನಟರು ಸ್ಟಿರಾಯ್ಡ್ ತೆಗೆದುಕೊಂಡು ಬಾಡಿ ಬಿಲ್ಡ್ ಮಾಡ್ತಾರೆ ಎನ್ನಲಾಗುತ್ತಿದೆ. ನಿಜವಾಗಿಯೂ ಬಾಡಿ ಬಿಲ್ಡ್ ಮಾಡೋಕೆ, ಸಿಕ್ಸ್ ಪ್ಯಾಕ್ ಗಳಿಸೋಕೆ ಸ್ಟಿರಾಯ್ಡ್ ಬೇಕಾ...? ನ್ಯಾಚುರಲ್ ಆಗಿ ಬಾಡಿ ಬಿಲ್ಡ್ ಮಾಡೋಕೆ ಸಾಧ್ಯವಿಲ್ವಾ..? ಈ ಎಲ್ಲಾ ವಿಚಾರಗಳ ಬಗ್ಗೆ ಸ್ಯಾಂಡಲ್ವುಡ್ ಸ್ಟಾರ್ ನಟರಿಗೆ ಜಿಮ್ ತರಬೇತಿ ನೀಡುತ್ತಿರುವ ಹಾಗೂ ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಆಗಿ ಹೆಸರು ಮಾಡಿರುವ ಶರಣ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಸ್ಟಿರಾಯ್ಡ್ ತೆಗೆದುಕೊಳ್ಳುವವರು ಮನೆಯಲ್ಲಿ ಕೂತರೆ ಬಾಡಿ ಬಿಲ್ಡ್ ಆಗುವುದಿಲ್ಲ. ಅವರು ಜಿಮ್ನಲ್ಲಿ ವರ್ಕೌಟ್ ಮಾಡಬೇಕು. ಬೇಗನೆ ಬಾಡಿ ಬಿಲ್ಡ್ ಮಾಡುವ ಆಸೆಯಿಂದ ಕೆಲವರು ಸ್ಟಿರಾಯ್ಡ್ ಬಳಸುತ್ತಾರೆ. ಆದರೆ ಸ್ಟಿರಾಯ್ಡ್ ಡ್ರಗ್ಸ್ ಅಲ್ಲ. ಇದು ನಿಶಕ್ತಿ ಇರುವ ರೋಗಿಗಳಿಗೆ ಕೊಡುವ ಮೆಡಿಸಿನ್, ಅಲ್ಲದೆ ಈ ಸ್ಟಿರಾಯ್ಡ್ ಸುಲಭವಾಗಿ ಮೆಡಿಕಲ್ ಶಾಪ್ಗಳಲ್ಲೇ ಸಿಗುತ್ತದೆ. ನಾನು ಯಾರಿಗೂ ಸ್ಟಿರಾಯ್ಡ್ ಬಳಸಿ ವರ್ಕೌಟ್ ಮಾಡುವಂತೆ ಸಲಹೆ ನೀಡುವುದಿಲ್ಲ. ಆದಷ್ಟು ನ್ಯಾಚುರಲ್ ಆಗಿ ವರ್ಕೌಟ್ ಮಾಡುವಂತೆ ಸಲಹೆ ನೀಡುತ್ತೇನೆ ಎಂದು ಶರಣ್ ಹೇಳಿದ್ದಾರೆ.
ಇನ್ನು ಡ್ರಗ್ಸ್ ಬಗ್ಗೆ ಮಾತನಾಡಿದ ಶರಣ್, ಡ್ರಗ್ಸ್ಗೆ ಅಡಿಕ್ಟ್ ಆಗಿರುವವರು ಜಿಮ್ನಲ್ಲಿ ಹೆಚ್ಚು ಸಮಯ ವರ್ಕೌಟ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಡ್ರಗ್ಸ್ ಸೇವಿಸಿ ವರ್ಕೌಟ್ ಮಾಡಿದರೆ ಅಂತವರಿಗೆ ಹೃದಯಾಘಾತ ಆಗುವ ಸಾಧ್ಯತೆ ಇದೆ. ನಾನು ಹಲವು ಸೆಲಬ್ರಿಟಿಗಳಿಗೆ ತರಬೇತಿ ನೀಡಿದ್ದೇನೆ. ಆದರೆ ಅವರಲ್ಲಿ ಯಾರೂ ಕೂಡಾ ಸ್ಟಿರಾಯ್ಡ್ ಬಳಸುವುದಿಲ್ಲ. ಮಾದಕ ಪ್ರಪಂಚವೇ ಬೇರೆ. ನನಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಸೆಲಬ್ರಿಟಿಗಳು ತೆಗೆದುಕೊಳ್ಳುತ್ತಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಸೆಲಬ್ರಿಟಿ ಜಿಮ್ ಟ್ರೈನರ್ ಶರಣ್ ಹೇಳಿದ್ದಾರೆ.