ತಿರುಪತಿ(ಆಂಧ್ರಪ್ರದೇಶ): ಸದಾ ಒಂದಿಲ್ಲೊಂದು ವಿವಾದಗಳಿಂದ 2021ರಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ 2022ರ ಮೊದಲ ದಿನದಂದು ತಿರುಪತಿಗೆ ಭೇಟಿ ನೀಡಿದ್ದು, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ವಿಶ್ವದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಪತಿಗೆ ಭೇಟಿ ನೀಡಿರುವ ನಟಿ ಕಂಗನಾ, ಶನಿವಾರ ಬೆಳ್ಳಂಬೆಳಗ್ಗೆ ಬಾಲಾಜಿ ಹಾಗೂ ಶ್ರೀಕಾಳಹಸ್ತಿ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು. ಇದಾದ ಬಳಿಕ ರಾಹು ಕೇತು ದೇಗುಲಕ್ಕೂ ಭೇಟಿ ನೀಡಿದ್ದರು.
ದೇವರ ದರ್ಶನ ಪಡೆದು ಹೊಸ ವರ್ಷ ಆರಂಭಿಸಿದ ನಟಿ
2021ರಲ್ಲಿ ಸದಾ ಒಂದಿಲ್ಲೊಂದು ವಿವಾದಗಳಿಂದ ಚರ್ಚೆಯಲ್ಲಿ ಉಳಿದುಕೊಂಡಿರುವ ನಟಿ ಕಂಗನಾ ರಣಾವತ್, ಈ ಸಲ ವರ್ಷದ ಮೊದಲ ದಿನವೇ ದೇವರ ದರ್ಶನ ಪಡೆದು ತಮ್ಮ ಹೊಸ ವರ್ಷ ಆರಂಭಿಸಿದ್ದಾರೆ. ದೇವರ ದರ್ಶನ ಪಡೆದುಕೊಂಡಿರುವ ಕೆಲವೊಂದು ಫೋಟೋ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, 2022ರಲ್ಲಿ ಕಡಿಮೆ ಪೊಲೀಸ್ ಪ್ರಕರಣ, ಎಫ್ಐಆರ್ ದಾಖಲಾಗುವಂತೆ ಮತ್ತು ಹೆಚ್ಚಿನ ಪ್ರೇಮ ಪತ್ರಗಳು ಬರುವಂತೆ ದೇವರ ಬಳಿ ಕೇಳಿಕೊಂಡಿದ್ದಾರಂತೆ.
ಇದನ್ನೂ ಓದಿರಿ: ಭೀಕರ ವಿಡಿಯೋ: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಅಪಾರ್ಟ್ಮೆಂಟ್ ಗೋಡೆಗೆ ಗುದ್ದಿಸಿದ ಯುವಕರು!
ಜೊತೆಗೆ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿರುವ ನಟಿ ಕಂಗನಾ, ತಿರುಪತಿ ಬಾಲಾಜಿ ಆಶೀರ್ವಾದದೊಂದಿಗೆ ಈ ವರ್ಷ ಪ್ರಾರಂಭ ಮಾಡುತ್ತಿದ್ದೇನೆ. ಇದು ಸ್ಮರಣೀಯವಾಗಿರಲಿದೆ ಎಂದಿದ್ದಾರೆ. 2022ರಲ್ಲಿ ನಟಿ ಕಂಗನಾ ಅಭಿನಯದ 'ಧಕಡ'(Dhaakad) ಚಿತ್ರ ಬರುವ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದ್ದು, ಇದಾದ ಬಳಿಕ 'ತೇಜಸ್' ಕೂಡ ತೆರೆ ಕಾಣಲಿದೆ.
2021ರಲ್ಲಿ ನಟಿ ಕಂಗನಾ ಸ್ವಾತಂತ್ರ್ಯ ವಿಚಾರ,ಸಿಖ್ಖರ್ ವಿರುದ್ಧ ಅವಹೇಳನಕಾರಿ ಟ್ವೀಟ್, ದೇಶಕ್ಕೆ ಇಂದಿರಾ ಗಾಂಧಿಯಂತಹ ಪ್ರಧಾನಿ ಅಗತ್ಯವಿದೆ ಸೇರಿದಂತೆ ಅನೇಕ ರೀತಿಯ ಹೇಳಿಕೆಗಳಿಂದ ನಟಿ ಕಂಗನಾ ರಣಾವತ್ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದರು. ಜೊತೆಗೆ ಹತ್ತಾರು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೇಶದ ವಿವಿದೆಡೆ ಎಫ್ಐಆರ್ ಸಹ ದಾಖಲಾಗಿವೆ.