ಕನ್ನಡ ಚಿತ್ರರಂಗದಲ್ಲಿ ಗ್ಲ್ಯಾಮರ್, ಹೀರೋಯಿನ್ ಓರಿಯೆಂಟೆಡ್ ಹಾಗು ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಟಿ ಹರಿಪ್ರಿಯಾ. 2011 ಹಾಗು 2012ರಲ್ಲಿ ಹೆಚ್ಚಾಗಿ ಕನ್ನಡ ಚಿತ್ರಗಳಿಗಿಂತ, ತೆಲುಗು ಹಾಗು ತಮಿಳು ಭಾಷೆಯ ಸಿನಿಮಾಗಳಲ್ಲಿ ಇವರು ಅಭಿನಯಿಸುತ್ತಿದ್ದರು.
ಆ ಸಮಯದಲ್ಲಿ ಹರಿಪ್ರಿಯಾ ಮೇಲೆ ಒಂದು ಆರೋಪ ಕೂಡ ಕೇಳಿ ಬಂದಿತ್ತು. ಅದೇನಪ್ಪಾ ಅಂದರೆ, ಹರಿಪ್ರಿಯಾ ಕನ್ನಡ ಸಿನಿಮಾಗಳಲ್ಲಿ ನಟಿಸದೆ, ಪರಿಭಾಷೆಯ ಸಿನಿಮಾಗಳ ಮೇಲೆ ಹೆಚ್ಚು ವ್ಯಾಮೋಹ ತೋರಿಸುತ್ತಿದ್ದಾರೆ ಅನ್ನೋದು.
ಆದರೆ 2014ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹರಿಪ್ರಿಯಾ ಸಿನಿಮಾ ಕೆರಿಯರ್ಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟ ಸಿನಿಮಾ 'ಉಗ್ರಂ'. ಈ ಸಿನಿಮಾ ಹರಿಪ್ರಿಯಾ ತೆಲುಗು ಭಾಷೆಯವರಲ್ಲ ಅಪ್ಪಟ ಕನ್ನಡದ ಹುಡುಗಿ ಅಂತಾ ಪ್ರೂವ್ ಮಾಡಿತ್ತು. ಅಲ್ಲಿಂದ ಇವರು ಬೆಳೆದು ನಿಂತ ಪರಿ ಕುತೂಹಲಕಾರಿಯಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ ಬ್ಯೂಟಿಯಾಗಿ ಮಿಂಚುತ್ತಿರುವ ಹರಿಪ್ರಿಯಾ, ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಸ್ಟಾರ್‌ಡಮ್ ಹೊಂದಿದ್ದಾರೆ. ಸದ್ಯ ಕನ್ನಡದಲ್ಲೇ ವರ್ಷಕ್ಕೆ ಏನಿಲ್ಲಾ ಅಂದ್ರೂ ಹತ್ತು ಸಿನಿಮಾಗಳನ್ನು ಮಾಡ್ತಾ ಇರೋ ಇವರು, ಕನ್ನಡಿಗರ ಹೃದಯ ಕದ್ದು, ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ.
ಸದ್ಯ ಉಪೇಂದ್ರ ಜೊತೆ ಲಗಾಮ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಕೊರೊನಾ, ಎರಡನೇ ಅಲೆ ಲಾಕ್ ಡೌನ್ ಸಂದರ್ಭದಲ್ಲಿ ಸ್ಕ್ರಿಪ್ಟ್ ರೈಟಿಂಗ್, ಪೇಂಟಿಂಗ್ ಹಾಗು ಫ್ಯಾಮಿಲಿ ಜೊತೆ ಕಾಲ ಕಳೆದಿದ್ದಾರಂತೆ. ಲಗಾಮ್ ಚಿತ್ರದಲ್ಲಿ ಉಪೇಂದ್ರ ಜೊತೆ ಮೊದಲ ಬಾರಿಗೆ ನಟಿಸುತ್ತಿರೋ ಬಗ್ಗೆ ತುಂಬಾನೇ ಖುಷಿ ಇದೆ ಅಂತಾರೆ. ಯಾಕೆಂದರೆ ಈ ಸಿನಿಮಾಗಿಂತ ಮುಂಚೆ ಹರಿಪ್ರಿಯಾ ಅವರು ಉಪೇಂದ್ರ ಜೊತೆ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಉಪ್ಪಿ ಸಾರ್ ಜೊತೆ ಕೆಲಸ ಮಾಡೋದು ತುಂಬಾ ಕೂಲ್ ಆಗಿ ಇರುತ್ತಂತೆ.
ಇದರ ಜೊತೆಗೆ ಹರಿಪ್ರಿಯಾ ಪೆಟ್ರೋಮ್ಯಾಕ್ಸ್, ಎವರ್, ಕಸ್ತೂರ್ ಬಾ ಅಂತಾ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಸಿನಿಮಾಗಳ ಕಥೆ ಆಯ್ಕೆ ಮಾಡೋದು ಇವ್ರ ತಾಯಿ ಅಂತೆ. ನಾನು ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯೋದಿಕ್ಕೆ ಕಾರಣ ಅಮ್ಮ ಅಂತಾರೆ.
ಸ್ಯಾಂಡಲ್‌ವುಡ್‌ನಲ್ಲಿ ನಂಬರ್ ಒನ್ ಆಗಬೇಕು ಅಂತಾ ಪ್ರತಿಯೊಬ್ಬ ನಟಿಗೂ ಆಸೆ ಇರುತ್ತೆ. ಆದರೆ ಹರಿಪ್ರಿಯಾ ಯಾವತ್ತು ನಂ1 ನಟಿಯಾಗಬೇಕು ಅಂತಾ ಅಂದುಕೊಂಡಿಲ್ಲ. ನಿರ್ದೇಶಕರು ನನ್ನ ಕೈಯಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನ ಮಾಡಿಸಿರೋದು ನನ್ನ ಅದೃಷ್ಟ ಅಂತಾರೆ.
ಕನ್ನಡ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಯಿಸಿರುವ ಹರಿಪ್ರಿಯಾ, ಸಿನಿಮಾ ಜರ್ನಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದು ಅಭಿಮಾನಿಗಳ ಆಶಯ.