ಕಾವ್ಯಾಂಜಲಿ ಧಾರಾವಾಹಿಯಲ್ಲಿ ಈ ಮೊದಲು ಅಂಜಲಿಯಾಗಿ ಅಭಿನಯಿಸುತ್ತಿದ್ದ ಸುಶ್ಮಿತಾ ಭಟ್ ಪಾತ್ರದಿಂದ ಹೊರ ಬಂದಾಗ ಆ ಜಾಗಕ್ಕೆ ದೀಪಾ ಜಗದೀಶ್ ಬಂದಿದ್ದರು. ಈಗ ಆ ಪಾತ್ರದಿಂದ ದೀಪಾ ಜಗದೀಶ್ ಸಹ ಹೊರ ಬಿದ್ದಿದ್ದಾರೆ. ಈ ಮೂಲಕ ಅಂಜಲಿ ಪಾತ್ರಕ್ಕೆ ಮೂರನೇ ಬಾರಿ ನಾಯಕಿ ಬದಲಾವಣೆ ಆದಂತಾಗಿದೆ.
ಮೂರು ತಿಂಗಳುಗಳ ಕಾಲ ಅಂಜಲಿಯಾಗಿ ನಟಿಸಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಿದ್ದ ದೀಪಾ ಜಗದೀಶ್ ಇದೀಗ ಧಾರಾವಾಹಿಯಿಂದ ಹೊರ ಬರುತ್ತಿದ್ದು, ನಿಖರವಾದ ಕಾರಣ ಇನ್ನೂ ಲಭ್ಯವಾಗಿಲ್ಲ. ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿರುವ ದೀಪಾ ಹಿರಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ.
ಮಹಾಸತಿ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಾ, ವಾರಸ್ದಾರ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಾಸ್ತ್ರ ಧಾರಾವಾಹಿಯಲ್ಲಿ ನಾಯಕಿ ಶಿವರಂಜನಿ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ದೀಪಾ, ‘ಪ್ರೀತಿ ಮಾಡಿ ಸ್ನೇಹ ಕಳೆದುಕೊಳ್ಳಬೇಡಿ’ ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದರು.
‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿರುವ ದೀಪಾ ಜಗದೀಶ್ ಕಾವ್ಯಾಂಜಲಿ ಮೂಲಕ ಕಿರುತೆರೆಗೆ ಮರಳಿದ್ದರು. ಇದೀಗ ಕಿರುತೆರೆಯಿಂದ ದೂರವಾಗಿರುವ ದೀಪಾ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.